ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಿಲ್ಲೆಯ ಜೀವನಾಡಿ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯು ಭರ್ತಿಯಾಗಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಕಾವೇರಿ ನದಿ ಪಾತ್ರದ ಪಟ್ಟಣ ಸೇರಿದಂತೆ ತಾಲೂಕಿನ ತಗ್ಗು ಪ್ರದೇಶಗಳು ಭಾಗಶಃ ಮುಳುಗಡೆಯಾಗಿವೆ.ತಾಲೂಕಿನ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮವಾಹಿನಿ, ಸ್ನಾನಘಟ್ಟ, ಶ್ರೀಸಾಯಿ ಮಂದಿರ, ವೆಲ್ಲೆಸ್ಲಿ ಸೇತುವೆ ಸೇರಿದಂತೆ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಭಾಗಶಹ ಮುಳುಗಡೆಗೊಂಡಿವೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಪ್ರಸ್ತುತ ಅಣೆಕಟ್ಟೆಗೆ 60,016 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯಲ್ಲಿ 123.20 ಅಡಿ ಸಂಗ್ರಹವಾಗಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 52,020 ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಮುಂಗೃತಾ ಕ್ರಮವಾಗಿ ಸಾರ್ವಜನಿಕರು ಕಾವೇರಿ ನದಿಗಿಳಿಯದಂತೆ ಎಚ್ಚರಿಕೆ ವಹಿಸಿ ಜಿಲ್ಲಾ ಹಾಗೂ ತಾಲೂಕು ಆಡಳಿತದಿಂದ ನದಿ ತೀರ ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಪೊಲೀಸ್ ಬ್ಯಾರಿಗೇಟ್ ಸೇರಿದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ.ದೋಣಿ ವಿಹಾರ ಸ್ಥಗಿತ:
ಕಾವೇರಿ ಜಲಾಶಯದಿಂದ ಕಾವೇರಿ ನದಿ ಮೂಲಕ 50 ಸಾವಿರ ಕ್ಯುಸೆಕ್‌ಕ್ಕೂ ಅಧಿಕ ನೀರು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧಿಸಲಾಗಿದೆ. ಪ್ರವಾಸಿಗರ ಪ್ರವೇಶಕ್ಕೂ ಸಹ ನಿರ್ಬಂಧ ಹೇರಲಾಗಿದೆ.ಬೃಂದಾವನದ ಬೋಟಿಂಗ್, ನೃತ್ಯಕಾರಂಜಿ ಸ್ಥಗಿತಮಂಡ್ಯ:ಕೃಷ್ಣರಾಜಸಾಗರ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಬೃಂದಾವನದ ಬೋಟಿಂಗ್ ಪಾಯಿಂಟ್ ಜಲಾವೃತಗೊಂಡಿದ್ದು, ಸಂಗೀತ ನೃತ್ಯ ಕಾರಂಜಿ ಕಾರಂಜಿ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಉತ್ತರ ಬೃಂದಾವನಕ್ಕೆ ಸಂಪರ್ಕ ಕಲ್ಪಿಸುವ ವಾಕಿಂಗ್ ಪಾಥ್ ಕೂಡ ಮುಳುಗಡೆಯಾಗಿದ್ದು, ಅದಕ್ಕಾಗಿ ಕಾವೇರಿ ನೀರಾವರಿ ನಿಗಮ ಬೋಟಿಂಗ್ ಕೂಡ ಬಂದ್ ಮಾಡಲಾಗಿದೆ. ದಕ್ಷಿಣ ಬೃಂದಾವನಕ್ಕೆ ಮಾತ್ರ ಪ್ರವೇಶಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಂಗೀತ ನೃತ್ಯ ಕಾರಂಜಿ ನೋಡೋವುದಕ್ಕೆ ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ.