ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸೌಹಾರ್ದತೆಯ ಪ್ರತೀಕ ಎನಿಸಿರುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಒಬ್ಬ ಸಾಮಾನ್ಯ ರೈತನ ಮಗನಾಗಿ ಭಾಗಿಯಾಗಿದ್ದೇ ನನ್ನ ಭಾಗ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಪಟ್ಟಣದ ಹಿರೇಮಠದ ದಸರಾ ಉತ್ಸವದಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಮಾದರಿಯಲ್ಲಿ ಒಂಬತ್ತು ದಿನಗಳ ಕಾಲ ಇಲ್ಲಿ ನಡೆಯುವ ದಸರಾ ಮಹೋತ್ಸವ ಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದೆ. ಸರ್ವ ಧರ್ಮಿಯರು ಭಾಗಿಯಾಗಿ ಈ ಉತ್ಸವದ ಮೆರುಗು ಹೆಚ್ಚಿಸಿದ್ದಾರೆ. ಇದರಿಂದ ಶ್ರೀಮಠದ ಸಂಸ್ಕೃತಿ, ಪರಂಪರೆ ಬೆಳೆಯುತ್ತಿದೆ ಎಂದು ಶ್ಲಾಘಿಸಿದರು.
ನಾಡಿನಲ್ಲಿ ತ್ರಿವಿಧ ದಾಸೋಹ ಮೂಲಕ ಮಠಮಾನ್ಯಗಳು ಸಮಾಜಕ್ಕೆ ಸಲ್ಲಿಸುತ್ತಿರುವ ಕೊಡುಗೆ ಅನನ್ಯವಾಗಿದೆ. ಬರಗಾಲ ಪರಿಸ್ಥಿತಿಯಲ್ಲೂ ಅನ್ನ, ಜ್ಞಾನ, ಧಾರ್ಮಿಕ ದಾಸೋಹ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ಕೊಡುಗೆ ನೀಡಿವೆ ಎಂದರು.ನೆರೆಯ ದೇಶಗಳು, ಕೆಲ ಮಿಷನರಿಗಳ ಕುತಂತ್ರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಬಲಿಷ್ಠ ಹಾಗೂ ಆರ್ಥಿಕವಾಗಿ ಸದೃಢಗೊಳಿಸಿದ್ದಾರೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನಮ್ಮ ತಂದೆಯವರಿಗೆ, ನಾಡಿಗೆ ಒಳ್ಳೆಯದನ್ನು ಬಯಸಿದವರು. ಸ್ವಾಮೀಜಿ ಯಾವಾಗಲೂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಧೈರ್ಯವಾಗಿ ಮುನ್ನುಗ್ಗಿ ಇಂದು ಕೂಡ ನನಗೆ ಆಶೀರ್ವಾದ ಮಾಡಿದ್ದಾರೆ ಎಂದವರು ಹೇಳಿದರು.
ಶಾಸಕ ನಿಖಿಲ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಪಿ.ಜಿ. ಹುಣಶ್ಯಾಳದ ನಿಜಗುಣದೇವ ಸ್ವಾಮೀಜಿ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಾಜಿ ಎಂಎಲ್‌ಸಿ ಮಹಾಮತೇಶ ಕವಟಗಿಮಠ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಮುಖಂಡರಾದ ಮಹಾವೀರ ನಿಲಜಗಿ, ರಾಜೇಶ ನೇರ್ಲಿ, ಸತ್ಯಪ್ಪ ನಾಯಿಕ, ರಾಜು ಮುನ್ನೋಳಿ, ಗುರು ಕುಲಕರ್ಣಿ, ರಾಚಯ್ಯ ಹಿರೆಮಠ, ಪರಗೌಡ ಪಾಟೀಲ, ಶೀತಲ ಬ್ಯಾಳಿ, ಭೀಮಸೇನ ಬಾಗಿ, ಆನಂದ ಲಕ್ಕುಂಡಿ, ರವಿ ಹಿಡಕಲ್, ಚನ್ನಪ್ಪ ಗಜಬರ, ಸುರೇಶ ಜಿನರಾಳಿ, ಸಂಜು ಬಸ್ತವಾಡ ಮತ್ತಿತರರು ಉಪಸ್ಥಿತರಿದ್ದರು.ಶ್ರದ್ಧೆ, ತಾಳ್ಮೆ ಮತ್ತು ಸಹನೆಯಿಂದ ಪ್ರಯತ್ನಪಡುವ ವ್ಯಕ್ತಿ ಜೀವನದಲ್ಲಿ ಉನ್ನತ ಗುರಿ ತಲುಪಿ ಯಶಸ್ವಿಯಾಗಲು ಸಾಧ್ಯ. ಇದಕ್ಕೆ ಬಿ.ವೈ. ವಿಜಯೇಂದ್ರ ಅವರೇ ಸಾಕ್ಷಿ.-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹುಕ್ಕೇರಿ ಹಿರೇಮಠ