ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ.ಎ. ಆಸೀಫ್ ಆಯ್ಕೆ

KannadaprabhaNewsNetwork |  
Published : Dec 05, 2024, 12:31 AM IST
 ಸುದ್ದಿಗೆ ಸಂಬಂಧಿಸಿದ ಫೋಟೋಗಳು  | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಂ.ಎ. ಆಸೀಫ್ ಆಯ್ಕೆಗೊಂಡಿದ್ದಾರೆ

ಬಳ್ಳಾರಿ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎಂ.ಎ. ಆಸೀಫ್ ಆಯ್ಕೆಗೊಂಡಿದ್ದಾರೆ. ಇಲ್ಲಿನ ಸರ್ಕಾರಿ ನೌಕರ ಸಂಘದ ಭವನದಲ್ಲಿ ಬುಧವಾರ ಜರುಗಿದ ಚುನಾವಣೆಯಲ್ಲಿ ಲೆಕ್ಕ ಪರಿಶೋಧನಾ ಇಲಾಖೆಯ ಎಂ.ಎ. ಆಸೀಫ್ ಅವರು 43 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತಗೊಂಡರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮತ್ತೊಂದು ಬಣದ ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಆರ್‌.ಎಚ್. ಲೋಕೇಶ್ ಅವರು 24 ಮತಗಳನ್ನು ಪಡೆದು ಪರಾಭವಗೊಂಡರು.

ಜಿಲ್ಲಾ ಖಜಾಂಚಿಯಾಗಿ ಜಿಲ್ಲಾಸ್ಪತ್ರೆಯ ನರ್ಸಿಂಗ್ ವಿಭಾಗದ ಹನುಮಂತರಾಯ ಅವರು 42 ಮತಗಳನ್ನು ಪಡೆದು ಆಯ್ಕೆಗೊಂಡರೆ, ಶರಣಪ್ಪ ಅವರು 26 ಮತಗಳನ್ನು ಪಡೆದು ಸೋಲುಂಡರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಂದಾಯ ಇಲಾಖೆಯ ಎಂ.ಸುರೇಶ್ ಕುಮಾರ್ ಅವರು 41 ಮತಗಳನ್ನು ಪಡೆದು ಗೆಲುವು ಪಡೆದರು. ಡಿಡಿಪಿಐ ಕಚೇರಿಯ ಎಫ್‌ಡಿಎ ಎಂ.ಮಹಾಂತೇಶ್ ಅವರು 26 ಮತಗಳನ್ನಷ್ಟೇ ಪಡೆದು ಸೋಲುಂಡರು.

ಐದು ವರ್ಷಗಳ ಅವಧಿಗೆ ಇಲ್ಲಿನ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಬುಧವಾರ ಬೆಳಗ್ಗೆ 10ರಿಂದ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ಜರುಗಿತು. ನಾಲ್ವರು ತಾಲೂಕು ಘಟಕದ ಅಧ್ಯಕ್ಷರು ಸೇರಿದಂತೆ ಒಟ್ಟು 68 ಜನರು ಮತದಾನ ಮಾಡಿದರು. ಈ ಪೈಕಿ 67 ಮತಗಳು ಸಿಂಧುತ್ವ ಹೊಂದಿದರೆ, ಒಂದು ಮತ ಕುಲಗೆಟ್ಟಿತು.

ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ತೀವ್ರ ಪೈಪೋಟಿಯಿದ ನಡೆದಿತ್ತು. ಎರಡು ಬಣಗಳು ಗೆಲುವಿಗೆ ರಾಜಕೀಯ ತಂತ್ರಗಾರಿಕೆ ನಡೆಸಿದ್ದವು. ಹೀಗಾಗಿ, ಜಿಲ್ಲಾಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳು ಯಾರಾಗಲಿದ್ದಾರೆ ಎಂಬ ಕುತೂಹಲವಿತ್ತು. ಸಂಜೆ 3 ಗಂಟೆಯಿಂದ ನಡೆದ ಮತ ಎಣಿಕೆ ಒಂದು ಗಂಟೆಯೊಳಗೆ ಪೂರ್ಣಗೊಂಡಿದ್ದು ಅಧ್ಯಕ್ಷ ಆಸೀಫ್, ಖಜಾಂಚಿಯಾಗಿ ಹನುಮಂತರಾಯ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಸುರೇಶ್ ಕುಮಾರ್ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು. ಮತಎಣಿಕೆ ಮುಗಿದು ಪದಾಧಿಕಾರಿಗಳ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಆಸೀಫ್‌ ಬೆಂಬಲಿತ ನೌಕರರು ಸಂಭ್ರಮಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ