ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಎಂ.ಬಿ.ಹರೀಶ್ ಬಾಬು ಅವಿರೋಧ ಆಯ್ಕೆ

KannadaprabhaNewsNetwork |  
Published : Aug 06, 2026, 01:45 AM IST
5ಕೆಎಂಎನ್ ಡಿ17 | Kannada Prabha

ಸಾರಾಂಶ

ಸಚಿವರಾದ ಎನ್. ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಶಾಸಕ ಕೆ.ಎಂ.ಉದಯ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಒಕ್ಕೂಟದ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇವರ ವಿಶ್ವಾಸ ಮತ್ತು ನಂಬಿಕೆಗೆ ದಕ್ಕೆ ಬಾರದ ರೀತಿಯಲ್ಲಿ ಒಕ್ಕೂಟವನ್ನು ಮುನ್ನಡೆಸಿಕೊಂಡು ಹೋಗುವುದಾಗಿ ಆಶ್ವಾಸನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಂ.ಬಿ.ಹರೀಶ್ ಬಾಬು ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್ ಹಾಗೂ ಒಕ್ಕೂಟದ ಕಾಂಗ್ರೆಸ್ ಪಕ್ಷ ನಿರ್ದೇಶಕರ ನಡುವೆ ಆದ ಒಡಂಬಡಿಕೆಯಂತೆ ಹರೀಶ್ ಬಾಬು ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕಾಲಕ್ಕೆ ಎಂ.ಬಿ.ಹರೀಶ್ ಬಾಬು ಹೊರತುಪಡಿಸಿ ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು ಅಂತಿಮವಾಗಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಹರೀಶ್ ಬಾಬು ಅವರನ್ನು ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮಾಜಿ ಅಧ್ಯಕ್ಷರಾದ ಯು.ಸಿ.ಶಿವಕುಮಾರ್, ಬಿ.ಬೋರೇಗೌಡ, ನಿರ್ದೇಶಕರಾದ ಎಂ.ಬಿ.ಹರೀಶ್, ಕೆ.ರವಿ, ಎಸ್.ಪಿ.ಸ್ವಾಮಿ, ಬಿ.ಆರ್.ರಾಮಚಂದ್ರ, ಎಸ್.ಎನ್.ಲಕ್ಷ್ಮಿನಾರಾಯಣ, ಡಿ.ಕೃಷ್ಣೇಗೌಡ ಒಕ್ಕೂಟದ ಆಡಳಿತ ವ್ಯವಸ್ಥಾಪಕ ಜಗದೀಶ್, ಮಾರುಕಟ್ಟೆ ವ್ಯವಸ್ಥಾಪಕ ಶ್ರೀಕಾಂತ್, ವಿತ್ತ ವ್ಯವಸ್ಥಾಪಕಿ ಪುಷ್ಪಲತಾ, ಡೇರಿ ವ್ಯವಸ್ಥಾಪಕಿ ಶ್ವೇತಾ ಹಾಗೂ ಅಭಿಯಂತರಾದ ಶಿವಕುಮಾರ್ ಸೇರಿದಂತೆ ಒಕ್ಕೂಟದ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ನೌಕರರು ನೂತನ ಅಧ್ಯಕ್ಷ ಹರೀಶ್ ಅವರನ್ನು ಅಭಿನಂದಿಸಿದರು.

ಒಕ್ಕೂಟದ ಅಭಿವೃದ್ಧಿಗಾಗಿ ಕೆಲಸ:

ಹಾಲು ಒಕ್ಕೂಟದ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಸಲಹೆ ಸಹಕಾರ ಪಡೆದು ಕಾರ್ಯನಿರ್ವಹಿಸುವುದಾಗಿ ನೂತನ ಅಧ್ಯಕ್ಷ ಎಂ.ಬಿ.ಹರೀಶ್ ಬಾಬು ಹೇಳಿದರು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಸಚಿವರಾದ ಎನ್. ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಶಾಸಕ ಕೆ.ಎಂ.ಉದಯ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಒಕ್ಕೂಟದ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇವರ ವಿಶ್ವಾಸ ಮತ್ತು ನಂಬಿಕೆಗೆ ದಕ್ಕೆ ಬಾರದ ರೀತಿಯಲ್ಲಿ ಒಕ್ಕೂಟವನ್ನು ಮುನ್ನಡೆಸಿಕೊಂಡು ಹೋಗುವುದಾಗಿ ಆಶ್ವಾಸನೆ ನೀಡಿದರು.

ಪಟಾಕಿ ಸಿಡಿಸಿ ಸಂಭ್ರಮಾಚರಣೆ:

ಜಿಲ್ಲಾ ಹಾಲು ಒಕ್ಕೂಟಕ್ಕೆ ಹರೀಶ್ ಬಾಬು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಮನ್ಮುಲ್ ಹೊರ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನಂತರ ನೂತನ ಅಧ್ಯಕ್ಷರನ್ನು ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಅಭಿನಂದಿಸಿ ಶೋಭ ಕೋರಿದರು. ಸಾರ್ವಜನಿಕರಿಗೆ ಸಿಹಿ ಸಂಭ್ರಮಾಚರಣೆ ಮಾಡಿದರು. ಡೇರಿಗಳಲ್ಲಿನ ಅವ್ಯವಹಾರಗಳಿಗೆ ಕಡಿವಾಣ: ಶಾಸಕ ಕೆ.ಎಂ.ಉದಯ್

ಮದ್ದೂರು:

ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಇನ್ನು ಮುಂದೆ ಕಡಿವಾಣ ಹಾಕಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಎಚ್ಚರಿಸಿದರು.ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಬಿ.ಹರೀಶ್ ಬಾಬು ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿಗೆ ಎರಡನೇ ಬಾರಿ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ದೊರಕಿದೆ. ಇದನ್ನು ಸಮರ್ಥ ರೀತಿಯಲ್ಲಿ ಅಭಿವೃದ್ಧಿ ಪಡಿಸಿಕೊಂಡು ಮುನ್ನಡೆಸುವ ಜವಾಬ್ದಾರಿ ಹೊಸ ಅಧ್ಯಕ್ಷ ಹರೀಶ್ ಬಾಬು ಅವರ ಮೇಲಿದೆ ಎಂದರು.

ಒಕ್ಕೂಟ ವ್ಯಾಪ್ತಿ ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಕೆಟ್ಟ ವ್ಯವಸ್ಥೆ ನಡೆಯದಂತೆ ಎಚ್ಚರಿಕೆ ವಹಿಸಿ ಪಾರದರ್ಶಕ ಆಡಳಿತ ನಡೆಸುವ ಜೊತೆಗೆ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಗೆ ಪ್ರಥಮ ಆದ್ಯತೆ ನೀಡುವಂತೆ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಒಕ್ಕೂಟದ ಅಧಿಕಾರಿಗಳು ನೂತನ ಅಧ್ಯಕ್ಷರಿಗೆ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಬೇಕು. ಯಾವುದೇ ಸಮಸ್ಯೆಗಳು ಎದುರಾದರೂ ಸಹ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಗಮನಕ್ಕೆ ತಂದು ಶೀಘ್ರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

ಈ ವೇಳೆ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸಿ.ಚೆಲುವರಾಜು, ನಿರ್ದೇಶಕ ಪಿ.ಸಂದರ್ಶ, ಯುವ ಕಾಂಗ್ರೆಸ್ ಅಧ್ಯಕ್ಷ ನಿತೇಶ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಆರ್.ಸಿ.ಮಹೇಶ್ ಪುರಸಭೆ ಮಾಜಿ ಸದಸ್ಯರಾದ ಮಹೇಶ್, ಎನ್‌.ಸಿ.ರಘು, ವಿಜಯಕುಮಾರ್, ವನಿತಾ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ: ಗುಡಿಬಂಡೆ ಬಂದ್ ಯಶಸ್ವಿ
ಪ್ರಮುಖ 4 ರೈಲ್ವೆ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಸಂಸದೆ ಮನವಿ