ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ತಾರತಮ್ಯವನ್ನು ಹೋಗಲಾಡಿಸಲು ಹೋರಾಟ ನಡೆಸಿದ ಶರಣರಲ್ಲಿ ಮಾಚಿದೇವರು ಕೂಡ ಅಗ್ರಗಣ್ಯರಾಗಿದ್ದು, ಶರಣರ ಮಲಿನ ಬಟ್ಟೆಗಳನ್ನು ಶುಚಿಗೊಳಿಸುವ ಜೊತೆಗೆ ಸಮಾಜದ ಮಲಿನವನ್ನೂ ತೊಳೆಯುತ್ತಾ ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು ಎಂದು ತಿಳಿಸಿದರು.
ಸಮಾಜದಲ್ಲಿನ ಅಂಕು- ಡೊಂಕುಗಳನ್ನು ತಿದ್ದುತ್ತಾ ಸಮಾಜಕ್ಕಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟರು. ಇಂತಹ ಶರಣರ, ವಚನಕಾರರ, ಸಾಧಕರ, ನಮ್ಮ ಸಮಾಜದ ಮಹಾನ್ ಚೇತನಗಳ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು. ನಮ್ಮದು ಸನಾತನ ಸಾಂಸ್ಕೃತಿಕ ರಾಷ್ಟ್ರ. ನಮ್ಮ ದೇಶದ ಹುಟ್ಟು ಯಾವಾಗ ಆಯಿತೆಂದು ಗೊತ್ತಿಲ್ಲ. ನಮ್ಮ ದೇಶಕ್ಕೆ ಸಾವೂ ಇಲ್ಲ. ದೇಶದ ಉಳಿವಿಗೆ ನಂಬಿಕೆಗಳು ಕಾರಣವಾಗಿದೆ ಎಂದರು.ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಎಂ.ನಾಗರಾಜ ಉಪನ್ಯಾಸ ನೀಡಿ ಮಾತನಾಡಿ, ದೇಶ ಸುಭೀಕ್ಷವಾಗಿರಲು ಜನರನ್ನು ಸರಿಪಡಿಸಬೇಕೆಂದು ಮಾಚಿದೇವರು ತಿಳಿಸಿದ್ದರು. ಕನಿಷ್ಟ ಶಿವ ಜ್ಞಾನ ಇರಬೇಕು. ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ್ದರು ಕಾಯಕಯೋಗಿ ಮಾಚಿದೇವ. 12ನೇ ಶತಮಾನದಲ್ಲಿ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ದಂಪತಿಗೆ ಜನಿಸಿದ ಮಾಚಿದೇವರು, ಕೇವಲ ಬಟ್ಟೆಗಳ ಮಲಿನ ಮಾತ್ರವಲ್ಲ ಸಮಾಜದ ಕೊಳೆಯನ್ನು ತೆಗೆಯುವ ಕೆಲಸ ಮಾಡುತ್ತಿದ್ದರು. ಇವರ 345 ವಚನಗಳು ಲಭ್ಯವಿದ್ದು, ಅತ್ಯಂತ ಸರಳ ಭಾಷೆಯಲ್ಲಿ ರಚಿಸಿರುವ ಇವರ ವಚನಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ ಎಂದರು.
ಪುಸ್ತಕದ ಜ್ಞಾನಕ್ಕಿಂತ ಅನುಭವದ ಜ್ಞಾನ ಲೇಸು ಎಂದು ಸಾರಿರುವ ಮಾಚಿದೇವರು, ಸಮಾಜದ ಅಂಕು ಡೊಂಕು ತಿದ್ದುವ ಕೆಲಸದ ಮತ್ತು ಕಾಯಕದ ಮೂಲಕ ಭಕ್ತಿ ತೋರುತ್ತಿದ್ದರು ಎಂದರು.
ಶರಣರು ಕಲ್ಯಾಣದಿಂದ ಉಳುವಿಗೆ ಹೋದಾಗ ಅವರು ಶರಣರು ಬರೆದ ವಚನಗಳ ಹಸ್ತಪ್ರತಿಗಳನ್ನು ರಕ್ಷಿಸಲು ರಾಜ ಬಿಜ್ಜಳನ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದರು ಎಂದು ತಿಳಿಸಿದರು.
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಕ್ರಾಂತಿಕಾರಿ ಹೋರಾಟಗಾರರ, ವಚನಕಾರರ, ಮಹಾನ್ ಪುರುಷರ ಚರಿತ್ರೆಯನ್ನು ಶಿಕ್ಷಣದಲ್ಲಿ ಅಳವಡಿಸಬೇಕು. ಆಗ ಪರಿಣಾಮಕಾರಿಯಾಗಿ ಅವರ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಸೀಲ್ದಾರ್ ರಾಜೀವ್, ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಎಚ್.ಎಸ್. ಸದಾಶಿವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.