ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಮಡಿವಾಳ ಮಾಚಿದೇವರೊಬ್ಬರು. 12ನೇ ಶತಮಾನದಲ್ಲಿ ಖಡ್ಗ ಹಿಡಿದು ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಶ್ರೇಯಸ್ಸು ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ನುಡಿದರು.ಮಡಿವಾಳ ಮಾಚೀದೇವರ ದೇವಸ್ಥಾನದಲ್ಲಿ ಮಡಿವಾಳ ಸಮಾಜದಿಂದ ಆಯೋಜಿಸಲಾಗಿದ್ದ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಮತ್ತು ಮಾಚಿದೇವರ ತತ್ವ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಬಸವಣ್ಣನವರು ಎಷ್ಟು ಮುಖ್ಯವೋ ಎಲ್ಲಾ ಶರಣರು ಅಷ್ಟೇ ಮುಖ್ಯ. ಹೀಗಾಗಿ ಮುಂಬರುವ ದಿನಗಳಲ್ಲಿ ಮಡಿವಾಳ ಮಾಚಿದೇವರ ಜಯಂತಿ ಅದ್ಧೂರಿಯಾಗಿ ನಡೆಯಬೇಕೆಂದು ಕರೆಕೊಟ್ಟರು.
ಮಾಜಿ ಎಂಎಲ್ಸಿ ವಿಜಯಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಕಾರ್ಯ ಕ್ರಮದಲ್ಲಿ ನಡೆದಿದ್ದು, ಇದು ಇತರರ ಸಾಧನೆಗೆ ಸ್ಪೂರ್ತಿ ಅಗುತ್ತದೆ. ಸಮಾಜದ ಪ್ರಗತಿಗೆ ತಮ್ಮ ಸಹಕಾರ ನೀಡುವುದಾಗಿ ವಿಜಯಸಿಂಗ್ ಭರವಸೆ ನೀಡಿದರು.ಜಿಲ್ಲಾ ಮಡಿವಾಳ ಸಮಾಜದ ಗೌರವಾಧ್ಯಕ್ಷ ದಿಗಂಬರ ಮಡಿವಾಳ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬಂದಾಗ ಪ್ರಗತಿ ಕಾಣಲು ಸಾಧ್ಯವಿದೆ ಎಂದರು.
ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಂದವರ ಓಣಿಯ ಅಕ್ಕಮಹಾದೇವಿ ಗವಿಯ ಸತ್ಯಕ್ಕತಾಯಿ ಅನುಭಾವ ನೀಡಿದರು. ಬೆಂಗಳೂರು ಮಾಚಿದೇವ ಸಮಿತಿಯ ಕಾರ್ಯದರ್ಶಿ ಸಾಯಬಣ್ಣ ಮಡಿವಾಳ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ್ ಮಡಿವಾಳ ಮಾತನಾಡಿದರು.ಸೇಡಂ ತಾಲೂಕಿನ ರಾಮಮಂದಿರ ಬಾಲಪ್ಪ ಸ್ವಾಮಿ ಮಠದ ಡಾ.ಶ್ರೀನಿವಾಸ ಮಹಾಸ್ವಾಮೀ ಸಾನಿಧ್ಯ ವಹಿಸಿದ್ದರು. ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಗಣಪತಿ ಸಸ್ತಾಪೂರ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಮಿ, ಪ್ರಮುಖರಾದ ಶಿವಕುಮಾರ ಬಿರಾದಾರ, ಡಾ.ಖದೀರೋದ್ದಿನ್, ನಿತ್ಯಾನಂದ ಮಂಠಾಳಕರ್, ಜಯದೀಪ ತೆಲಂಗ, ಭಾಲ್ಕಿಯ ದಿಲೀಪ ಮಡಿವಾಳ, ಚಿಟಗುಪ್ಪಾದ ಬಸವರಾಜ ಮಡಿವಾಳ, ಹುಮನಾಬಾದನ ದತ್ತು ಕೋಳಾರೆ, ಬಸವಕಲ್ಯಾಣ ತಾಲೂಕು ಉಪಾಧ್ಯಕ್ಷ ವಿಜಯಕುಮಾರ ಮಡಿವಾಳ, ಕಾರ್ಯದರ್ಶಿ ಆಕಾಶ ಮಡಿವಾಳ, ಖಜಾಂಚಿ ಜಗನ್ನಾಥ ಮಡಿವಾಳ, ಸಹ ಕಾರ್ಯದರ್ಶಿ ಶರಣು ಮಡಿವಾಳ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ನಗರದ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಮಡಿವಾಳ ಮಾಚಿದೇವರ ಹೊಂಡದ ವರೆಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ಜರುಗಿತು. ಸಂಸ್ಥಾನ ಗವಿಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಸಮಾಜದ ಪದಾಧಿಕಾರಿಗಳು, ಗಣ್ಯರು, ಭಕ್ತರು ಭಾಗವಹಿಸಿದ್ದರು.