ಸಮಾಜದ ಅಂಕು ಡೊಂಕು ತಿದ್ದಿದ ಮಡಿವಾಳ ಮಾಚಿದೇವ: ಕೂಡಲಗಿ

KannadaprabhaNewsNetwork |  
Published : Feb 04, 2026, 03:15 AM IST
ಫೋಟೋ: 1ಪಿಟಿಆರ್-ಮಾಚಿದೇವಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ನಡೆಯಿತು.  | Kannada Prabha

ಸಾರಾಂಶ

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಮಡಿವಾಳರ ಸಂಘದ ಆಶ್ರಯದಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಮಡಿವಾಳ ಮಾಚಿದೇವ ಜಯಂತಿ ದಿನಾಚರಣೆ

ಪುತ್ತೂರು: ೧೨ನೇ ಶತಮಾನದಲ್ಲಿ ತುಂಬಿಕೊಂಡಿದ್ದ ಜಾತೀಯತೆ, ದುರ್ಬಲರ ಶೋಷಣೆ, ಮೌಢ್ಯಗಳನ್ನು ತನ್ನ ಅಗಾಧ ಪ್ರೌಢಿಮೆ ಮೂಲಕ ತೊಡೆದು ಹಾಕುವ ಮೂಲಕ ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದಿದ ಮಡಿವಾಳ ಮಾಚಿದೇವ ಅವರು ಶರಣರಲ್ಲಿ ಅಗ್ರಗಣ್ಯ ಶರಣರಾಗಿದ್ದರು ಎಂದು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಎಸ್. ಬಿ. ಕೂಡಲಗಿ ಹೇಳಿದರು.ಅವರು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಮಡಿವಾಳರ ಸಂಘದ ಆಶ್ರಯದಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀ ಮಡಿವಾಳ ಮಾಚಿದೇವ ಜಯಂತಿ ದಿನಾಚರಣೆಯಲ್ಲಿ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ರಾಜ್ಯವ್ಯಾಪಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅಲ್ಲಮ ಪ್ರಭುಗಳ ಅನುಭವ ಮಂಟಪದಲ್ಲಿ ತೊಡಗಿಸಿಕೊಂಡಿದ್ದ ಮಡಿವಾಳ ಮಾಚಿದೇವ ಅವರು ಶಿವ ಭಕ್ತರ ಬಟ್ಟೆಯನ್ನು ಮಾತ್ರ ಮಡಿ ಮಾಡುತ್ತೇನೆ ಎಂದು ಹೇಳಿದ ಕಾರಣಕ್ಕಾಗಿ ಬಿಜ್ಜಳರ ಕೋಪಕ್ಕೆ ಗುರಿಯಾಗಿ ಹಲವಾರ ಸಂಕಷ್ಟಗಳನ್ನು ಅನುಭವಿಸಿದ್ದರು. ತನ್ನ ವಚನಗಳ ಮೂಲಕ ಮೌಡ್ಯತೆಗಳ ವಿರುದ್ದ ಸಮರ ಸಾರಿದ್ದರು. ಜನರಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಅವರ ತತ್ವ ಸಿದ್ದಾಂತಗಳನ್ನು ಅನುಸರಿಸುವುದರೊಂದಿಗೆ ಅವರ ಕಾರ್‍ಯವನ್ನು ನಾವು ಅರಿಯಬೇಕು ಎಂದರು.ಸಂಸ್ಮರಣಾ ಉಪನ್ಯಾಸ ನೀಡಿದ ಪುತ್ತೂರು ವೀರಮಾಚಿದೇವ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಇಂದುಶೇಖರ ಪಿ.ಬಿ. ಅವರು ಬಸವಣ್ಣ ಅವರೊಂದಿಗೆ ಸೇರಿಕೊಂಡು ಕನ್ನಡ ನಾಡಿನಲ್ಲಿದ್ದ ಜಾತಿ ಪದ್ದತಿಯನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ.

ಕೆಳ ವರ್ಗಕ್ಕೆ ಸೇರಿದವರಿಗೆ ಶಿಕ್ಷಣ ನೀಡದಿರುವ ವ್ಯವಸ್ಥೆಗಳ ವಿರುದ್ದ ಸೆಟೆದು ನಿಂತು ಅವರ ವಿದ್ಯೆಗಾಗಿ ಶ್ರಮಿಸಿದ್ದರು. ೧೨ನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದ ಅನುಭವ ಮಂಟಪದಲ್ಲಿ ಜಾತೀಯತೆ, ಅಸ್ಪೃಶ್ಯತೆ ವಿರುದ್ದ ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದ್ದರು. ತನ್ನ ಸಾವಿರಾರು ವಚನಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಮಾಚಿದೇವರನ್ನು ವೀರಭದ್ರನ ಅವತಾರ ಎಂದು ಅನೇಕ ಇತಿಹಾಸಕಾರರು ವರ್ಣಿಸಿದ್ದಾರೆ. ವಚನ ರಚನೆಯೊಂದಿಗೆ ಇತರರ ಅನೇಕ ವಚನಗಳನ್ನು ಸಂರಕ್ಷಿಸುವ ಕೆಲಸವನ್ನು ಮಾಚಿದೇವರು ಮಾಡಿದ್ದಾರೆ ಎಂದರು. ಪುತ್ತೂರು ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಪಿ.ಎನ್. ಸುಭಾಶ್ಚಂದ್ರ ಮಾತನಾಡಿದರು. ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಉಪ ತಹಸೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು. ತಾಲೂಕು ಕಚೇರಿ ಸಿಬ್ಬಂದಿ ಡಿ.ಟಿ. ದಯಾನಂದ ಸ್ವಾಗತಿಸಿ, ವಂದಿ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ