ಕಲ್ಯಾಣ ಕ್ರಾಂತಿಯಲ್ಲಿ ನೆರವಾದ ಮಾಚಿದೇವರು

KannadaprabhaNewsNetwork |  
Published : Feb 10, 2025, 01:46 AM IST

ಸಾರಾಂಶ

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕಲಚೂರಿಗಳ ಸೇನೆಯನ್ನು ಧೈರ್ಯದಿಂದ ಎದುರಿಸಿ, ಕಲ್ಯಾಣದಿಂದ ಶರಣರು ತಪ್ಪಿಸಿಕೊಂಡು ಪಾರಾಗುವುದರಲ್ಲಿ ನೆರವಾದವರು ಗಣಾಚಾರ ಸಂಪನ್ನ ವೀರಶರಣ ಮಾಚಿದೇವರು. ಅವರು ಈ ರೀತಿ ನೆರವಾಗದಿದ್ದರೆ ನಮಗೆ ಹನ್ನೆರಡನೇ ಶತಮಾನದ ಚರಿತ್ರೆಯೇ ಸಿಗುತ್ತಿರಲಿಲ್ಲ ಎಂದು ಶರಣರ ತತ್ವ ಚಿಂತಕ, ಸಾಹಿತಿ ಮುದ್ದೇನಹಳ್ಳಿ ನಂಜಯ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕಲಚೂರಿಗಳ ಸೇನೆಯನ್ನು ಧೈರ್ಯದಿಂದ ಎದುರಿಸಿ, ಕಲ್ಯಾಣದಿಂದ ಶರಣರು ತಪ್ಪಿಸಿಕೊಂಡು ಪಾರಾಗುವುದರಲ್ಲಿ ನೆರವಾದವರು ಗಣಾಚಾರ ಸಂಪನ್ನ ವೀರಶರಣ ಮಾಚಿದೇವರು. ಅವರು ಈ ರೀತಿ ನೆರವಾಗದಿದ್ದರೆ ನಮಗೆ ಹನ್ನೆರಡನೇ ಶತಮಾನದ ಚರಿತ್ರೆಯೇ ಸಿಗುತ್ತಿರಲಿಲ್ಲ ಎಂದು ಶರಣರ ತತ್ವ ಚಿಂತಕ, ಸಾಹಿತಿ ಮುದ್ದೇನಹಳ್ಳಿ ನಂಜಯ್ಯ ಅಭಿಪ್ರಾಯಪಟ್ಟರು.

ಅವರು ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿಯಲ್ಲಿ, ಮಡಿವಾಳ ವೃತ್ತಿಯ ಕುಟುಂಬದಲ್ಲಿ ಜನಿಸಿದ ಈತ ಬಸವಣ್ಣನವರ ಪ್ರಭಾವದಿಂದ ಕಲ್ಯಾಣಕ್ಕೆ ಹೋಗಿ ಅಲ್ಲಿ ಕೇವಲ ಭಕ್ತರ, ಶರಣರ ಬಟ್ಟೆಗಳನ್ನು ಮಡಿಮಾಡುವ ಕಾಯಕ ಮಾಡುತ್ತಾ, ಬಸವಣ್ಣನವರ ಅಂಗರಕ್ಷಕನಾಗಿ ಕಲಚೂರಿ ರಾಜ್ಯದಲ್ಲಿ ಸೇನಾ ತುಕಡಿಯೊಂದರ ಜವಾಬ್ದಾರಿ ಸ್ಥಾನಕ್ಕೆ ಏರಿದ್ದು, ಆತನಲ್ಲಿದ್ದ ನಿಷ್ಠೆ ಧೈರ್ಯ ಸಾಹಸಗಳೇ ಕಾರಣ ಎಂದರು.

ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತನೆ ಮಾಡುತ್ತಿದ್ದ ಪ್ರಗತಿಪರರಿಗೆ, ಬಂಡಾಯಗಾರರಿಗೆ ಹನ್ನೆರಡನೇ ಶತಮಾನದಲ್ಲಿ ರಾಜಪ್ರಭುತ್ವವನ್ನು ಮತ್ತು ಕೋಮುವಾದಿಗಳನ್ನು ಎದುರು ಹಾಕಿಕೊಂಡು ವೇದಿಕೆಯನ್ನು ಕಲ್ಪಿಸಿಕೊಟ್ಟವರು ಬಸವಣ್ಣ, ಅವರ ನೇತೃತ್ವದಲ್ಲಿ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಜಾತ್ಯತೀತ ಪರಿಕಲ್ಪನೆ ಆಧಾರದ ಮೇಲೆ ಸಮಾಜ ಕಟ್ಟಲು ಪ್ರಯತ್ನಿಸಿದವರು. ಆದರೆ ಮೂಲಭೂತವಾದಿಗಳು ಅದನ್ನು ದಮನ ಮಾಡಲು ಪ್ರಯತ್ನಿಸಿದರೂ ಅವರ ಚಿಂತನೆಗಳ ಅನುಷ್ಠಾನಕ್ಕಾಗಿ ಪ್ರಸ್ತುತ ಸಮಾಜದಲ್ಲಿ ಅಲ್ಲಲ್ಲಿ ಹೋರಾಟಗಳು ನಡೆಯುತ್ತಿವೆ ಎಂದರು.

ಇಂದು ಬಸವಣ್ಣನವರ ಅನುಯಾಯಿಗಳಲ್ಲಿ ಹನ್ನೆರಡನೇ ಶತಮಾನದಲ್ಲಿದ್ದ ಉತ್ಸಾಹವನ್ನು ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ. ಲಿಂಗಧಾರಿಗಳಾಗಿ ಸಮಾನತೆಯ ತತ್ವವನ್ನು ಸಾರಿದ್ದ ಅಂದಿನ ಶರಣರನ್ನು, ಇಂದು ಜಾತಿಯ ಸುಳಿಗೆ ಕಟ್ಟಿಹಾಕುತ್ತಾ ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದರು.

ಈ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಡಾ. ವಿಜಯಕುಮಾರ ಕಮ್ಮಾರ್ ಮಾತನಾಡಿದರು, ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ರಾಮಕೃಷ್ಣಪ್ಪ, ಬಸವಕೇಂದ್ರದ ಕಲ್ಪನಾ ವೇದಿಕೆಯಲ್ಲಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್ ಸ್ವಾಗತಿಸಿದರು. ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು