ಯಲಬುರ್ಗಾ: ಶಿವಶರಣ ಮಡಿವಾಳ ಮಾಚಿದೇವರು ೧೨ನೇ ಶತಮಾನದಲ್ಲೇ ತಮ್ಮ ವಚನದ ಮೂಲಕ ಸಮಾಜದಲ್ಲಿನ ಸಮಾನತೆ, ಮೂಢನಂಬಿಕೆ, ಅನಾಚಾರಗಳನ್ನು ದೂರವಾಗಿಸಲು ಶ್ರಮಿಸಿದ ಶರಣರಲ್ಲಿ ಒಬ್ಬರಾಗಿದ್ದಾರೆ ಎಂದು ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಹೇಳಿದರು.
ಸಮಾನತೆಯ ಚಿಂತನೆ ವಿರೋಧಿಸಿದವರ ಬಟ್ಟೆ ತೊಳೆಯುವುದಿಲ್ಲ ಎಂದು ತಿರಸ್ಕರಿಸಿದ್ದ ಮಾಚಿದೇವ, ರಾಜ ಬಿಜ್ಜಳನನ್ನು ಸಹ ವಿರೋಧಿಸಿದ ಧೈರ್ಯಶಾಲಿ ಹಾಗೂ ಬಸವಣ್ಣನನ್ನು ಪ್ರಶ್ನಿಸುವಷ್ಟು ನಿಷ್ಠುರವಾದಿಯಾಗಿದ್ದರು. ಮಾಚಿದೇವನ ನಿಜವಾದ ಅಸ್ತ್ರ ಎಂದರೆ ವಸ್ತ್ರ. ಪ್ರತಿಯೊಬ್ಬರೂ ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಸಹನೆ ಮತ್ತು ವಿಚಾರವಾದದ ಜೀವನ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ಆಚರಣೆ:ಬಸವರಾಜ ತೆನ್ನೆಳ್ಳಿ ತಮ್ಮ ಕಚೇರಿಯಲ್ಲಿ ಶರಣ ಮಡಿವಾಳ ಮಾಚಿದೇವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಮಡಿವಾಳ ಸಮಾಜ ಬಾಂಧವರು ಬಟ್ಟೆ ತೊಳೆಯುವ ಕಾಯಕದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ನಿಷ್ಠೆ, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡು ಬಂದವರು. ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಈ ಸಮಾಜ ಹೆಚ್ಚು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಗ್ರೇಡ್-೨ ತಹಸೀಲ್ದಾರ್ ನಾಗಪ್ಪ ಸಜ್ಜನ್, ಹನುಮಂತಗೌಡ ಪಾಟೀಲ, ಬಸವಲಿಂಗಪ್ಪ ಹಂಚಿನಾಳ, ಬಸವರಾಜ್ ಮಾಲಿಪಾಟೀಲ್, ಶರಣಪ್ಪ ಇಂಡಿ, ಶೇಖಪ್ಪ, ಹಜರತ ಅಲಿ, ಸತೀಶ್ ಹಟ್ಟಿ, ಶಿವರಾಜ, ಉಮೇಶ, ಪ್ರಶಾಂತ ಬಡಿಗೇರ ಹಾಗೂ ಮಡಿವಾಳ ಸಮಾಜದ ಮುಖಂಡರು ಇದ್ದರು.