ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಾದಾಪುರ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮ ಸಭೆಯು ಶ್ರೀಸಿದ್ಧಿಬುದ್ಧಿ ವಿನಾಯಕ ದೇವಾಲಯದ ಸಮೀಪದ ಸಮುದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಮರುವಂಡ ಜಾಲಿ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಫೆ. 18 ರಂದು ಕರೆದ ಗ್ರಾಮಸಭೆಯನ್ನು ಅಧಿಕಾರಿಗಳು ಕೆಲವರ ಗೈರು ಹಾಜರಿಯಿಂದ ಸಭೆಯನ್ನು ಮುಂದೂಡಿದ್ದು, 12 ರಂದು ಕರೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದರು. ಜಲಜೀವನ್ ಯೋಜನೆಯಡಿ ಕಾಮಗಾರಿ ಅಪೂರ್ಣವಾಗಿದೆ. ಮಾದಾಪುರ ಗ್ರಾಮಸ್ಥರು ಕುಡಿಯುವ ನೀರು ಸಿಗುತ್ತಿಲ್ಲ ಎಂದು ಕೊಪ್ಪತ್ತಂಡ ಗಣೇಶ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ಮಧ್ಯಪ್ರವೇಶಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಸೋಮಣ್ಣ ಅವರು ಮಾದಾಪುರ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಸಮಸ್ಯೆಗೆ ಪೂರ್ಣ ವಿರಾಮ ಹಾಕಬೇಕು. ಏಪ್ರಿಲ್ 15 ರ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಅಭಿಯಂತರರಾದ ವೀರೇಂದ್ರ ಅವರಿಗೆ ತಾಕೀತು ಮಾಡಿದರು.
ಈ ವಿಭಾಗಕ್ಕೆಅನುದಾನ ಗ್ರಾಮ ಪಂಚಾಯಿತಿಯಿಂದ ನೀಡಲಾಗುತ್ತಿದೆ ಎಂದು ಮಜೀದ್, ಸೋಮಪ್ಪ, ಕೊಪ್ಪತ್ತಂಡ ಗಣೇಶ ಪ್ರಸ್ತಾಪಿಸಿದರು. ಅಧ್ಯಕ್ಷರು ಉತ್ತರಿಸಿ ಇದರಿಂದ ಇತರೆ ವಾರ್ಡಿನ ಸಮಸ್ಯೆಗೆ ಅನುದಾನ ಕೊರತೆಯಾಗಿದೆ. ಈ ಬಗ್ಗೆ ಜಿ.ಪಂ.ಇಲಾಖೆಗೆ ಲಿಖಿತ ಮಾಹಿತಿ ನೀಡಲಾಗಿದೆ ಎಂದರು.
ಕೃಷಿ ಇಲಾಖೆ ಅಡಿಕೆ ಗಿಡ ರೈತರಿಗೆ ನೀಡಬೇಕು ಎಂದು ಮಂಡೆಯಂಡ ಗಣೇಶ, ಮಜೀದ್ ಅಧಿಕಾರಿಗಳಿಗೆ ಸಲಹೆಯಿತ್ತರು.
ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 400 ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರು ನಿವೇಶನ ರಹಿತರಾಗಿದ್ದಾರೆ. ಅವರಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸದಸ್ಯ ಸೋಮಪ್ಪ ಆಗ್ರಹಿಸಿದರು.
ಈ ಸಭೆಯಲ್ಲಿ ಪಿಡಿಓ ಗೂಳಪ್ಪ ಕೂತಿನ ಗ್ರಾ.ಪಂ.ಉಪಾಧ್ಯಕ್ಷ ಸುರೇಶ ಬಾವೆ, ಸದಸ್ಯರಾದ ಕೆ.ಸಿ.ಶೀಲಾ, ನಿರೂಪ, ಮಾನಸ, ಕೆ.ಎ.ಲತೀಫ್, ಪಿ.ಡಿ.ಅಂತೋಣಿ (ತಂಗಚ್ಚ), ಮನುಬಿದ್ದಪ್ಪ, ದಮಯಂತಿ, ಗೋಪಿ ಭಾಗೀರಥಿ, ಜ್ಯೋತಿ, ಲೆಕ್ಕಾಧಿಕಾರಿ ಅನಿತಾ, ಸಿಬ್ಬಂದಿ ಸಿ.ಸಿ.ರವೀಂದ್ರ ಹಾಗೂ ಪ್ರೀತಿ ಉಪಸ್ಥಿತರಿದ್ದರು.