ಮೂಡುಬಿದಿರೆ ಅಲಂಗಾರು ಬಡಗುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಮಂಗಳವಾರ ಶ್ರೀ ಹರಿಲೀಲಾ ಯಕ್ಷಗಾನದ ೫ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವ ನಡೆಯಿತು.
ಮದ್ದಲೆಗಾರ ಪದ್ಯಾಣ ಶಂಕರನಾರಾಯಣ ಭಟ್‌ಗೆ ಶ್ರೀ ಹರಿಲೀಲಾ ಯಕ್ಷಗಾನ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆಯ ಶಬ್ದ ಹೆಚ್ಚುತ್ತಿದ್ದು ಇದರಿಂದಾಗಿ ಪಂಚವಾದ್ಯಗಳೂ ಮೂಲೆ ಗುಂಪಾಗುತ್ತಿವೆ. ಅದರಲ್ಲೂ ಮದ್ದಲೆ ನೇಪಥ್ಯಕ್ಕೆ ಸರಿಯುತ್ತಿದ್ದು ಇದಕ್ಕೆ ಚೆಂಡೆಯೇ ಕಾರಣವಾಗಿದೆ. ಚೆಂಡೆಯ ಬಳಕೆ ಮಿತಗೊಳಿಸದಿದ್ದರೆ ಭವಿಷ್ಯದಲ್ಲಿ ಮದ್ದಲೆ ಯಕ್ಷಗಾನದಿಂದ ಕಣ್ಮರೆಯಾಗಬಹುದು ಎಂದು ಅರ್ಥಧಾರಿ, ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ.ಮೂಡುಬಿದಿರೆ ಅಲಂಗಾರು ಬಡಗುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಮಂಗಳವಾರ ನಡೆದ ಶ್ರೀ ಹರಿಲೀಲಾ ಯಕ್ಷಗಾನದ ೫ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಯಕ್ಷಗಾನದ ಹಿರಿಯ ಮದ್ದಲೆಗಾರ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ೨೦೨೫ನೇ ಸಾಲಿನ ಹರಿಲೀಲಾ ಯಕ್ಷಗಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ನಿ ವನಜಾಕ್ಷಿ ಭಟ್ ಅವರನ್ನು ಗೌರವಿಸಲಾಯಿತು.
ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ ಅಭಿನಂದನಾ ಭಾಷಣದಲ್ಲಿ, ಗಂಭೀರ ವ್ಯಕ್ತಿತ್ವ, ಸೌಂದರ್ಯದ ಮೂರ್ತರೂಪದಂತಿರುವ ಪದ್ಯಾಣ ಶಂಕರನಾರಾಯಣ ಭಟ್ ಯಕ್ಷಗಾನದ ಸ್ಟಾರ್ ಕಲಾವಿದರು. ಹಿಮ್ಮೇಳ ಕಲಾದವಿರಿಗೆ ಇವರು ಮಾದರಿ ಮತ್ತು ಆದರ್ಶರಾಗಿದ್ದಾರೆ. ಚೆಂಡೆ ಯಕ್ಷಗಾನದ ಭಾಗವಾಗಿ ಬಂದಿದ್ದು ಇದರ ಬಳಕೆಯ ಕುರಿತು ಅಭ್ಯಾಸಿ ವಲಯದಲ್ಲಿ ಚರ್ಚೆಯಾಗಲಿ ಎಂದರು. ಉದ್ಯಮಿ ಕೆ. ಶ್ರೀಪತಿ ಭಟ್ ಮಾತನಾಡಿದರು. ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈತ್ರಿ ಭಟ್ ಸನ್ಮಾನ ಪತ್ರ ವಾಚಿಸಿದರು. ಚೇತನ್ ಕತ್ತಲ್‌ಸಾರ್ ವಂದಿಸಿದರು. ಸಾಯಿಸುಮ ನಾವಡ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.