ಕನ್ನಡಪ್ರಭ ವಾರ್ತೆ ಮದ್ದೂರು
ಗೊರವನಹಳ್ಳಿ ಗ್ರಾಮಸ್ಥರ ಹೋರಾಟಕ್ಕೆ ಗೆಜ್ಜಲಗೆರೆ, ಚಾಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಮದ್ದೂರು ಪೊಲೀಸ್ ಠಾಣೆ ಸಿಪಿಐ ನವೀನ್, ಇದಕ್ಕೆ ಕುಮ್ಮಕ್ಕು ನೀಡಿದ ತಾಪಂ ಇಒ ರಾಮಲಿಂಗಯ್ಯ, ಪಿಡಿಒ ಪೂರ್ಣಿಮಾ ಅವರುಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆ ನಡೆಸಿದರು. ಶಾಸಕ ಕೆ.ಎಂ.ಉದಯ್, ಪೊಲೀಸ್ ಮತ್ತು ತಾಲೂಪಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕೆಲಕಾಲ ಧರಣಿ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಕೈಬಿಡಬೇಕು ಎಂದು ಪಟ್ಟು ಹಿಡಿದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಧರಣಿ ನಡೆಸಿದರು. ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ನೆಲದ ಕಾನೂನನ್ನು ಗೌರವಿಸದೆ ವಿಚಾರದಲ್ಲಿ ವಿವೇಚನೆ ಇಲ್ಲದೆ ಕಡತ ಸಾಗಿಸಲು ವಿರೋಧಿಸಿದ ಧರಣಿ ನಿರತ ಗೊರವನಹಳ್ಳಿ ಮಹಿಳೆಯರ ಮೇಲೆ ಮೃಗಗಳಂತೆ ವರ್ತಿಸಿದ್ದೀರಿ ಎಂದು ಪೊಲೀಸರಿಗೆ ಛೀಮಾರಿ ಹಾಕಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀಲತಾ, ಗೊರವನಹಳ್ಳಿ ಪ್ರಸನ್ನ, ಸೋಶಿ ಪ್ರಕಾಶ್, ಜಿ.ಸಿ .ಶಿವಪ್ಪ, ಗ್ರಾಮದ ಯಜಮಾನರುಗಳಾದ ರವಿ, ಸಿದ್ದರಾಜು, ಸುರೇಶ, ಉಮೇಶ, ಅವಿನಾಶ್, ಮಹೇಶ, ಶಿವಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ,ಮುಖಂಡರಾದ ಜಿ.ಎ .ಶಂಕರ್, ಲಿಂಗಪ್ಪಾಜಿ, ಶಿವಲಿಂಗಯ್ಯ, ಸಿದ್ದರಾಜು, ಶಂಕರೇಗೌಡ, ರಾಜಶೇಖರ್, ಕುಮಾರ್, ಶಿವ ಬೋರಯ್ಯ ಮತ್ತಿತರರು ಭಾಗವಹಿಸಿದ್ದರು. ಗ್ರಾಮಸ್ಥರು ಪ್ರತಿಭಟನೆ ಹಿನ್ನೆಲೆಯಲ್ಲಿ ಮದ್ದೂರು ನಗರಸಭೆ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.