ಹೊಸಕೋಟೆ: ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ವ್ಯಾಪಕವಾಗಿ ಬೆಳೆಯುತ್ತಿದ್ದು ಸ್ವಚ್ಛ, ನಿರ್ಮಲ ಹೊಸಕೋಟೆ ನಿರ್ಮಾಣದ ಪರಿಕಲ್ಪನೆ ಹೊತ್ತು ಅಧಿಕಾರಿಗಳು ಕೆಲಸ ಮಾಡುತ್ತಿದ್ದು ನಾಗರಿಕರು ಅಗತ್ಯ ಸಹಕಾರ ನೀಡಲಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಮನವಿ ಮಾಡಿದರು.
ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಅಸೋಸಿಯೇಷನ್ 9267ನೇ ಸ್ವಚ್ಛತಾ ಅಭಿಯಾನ ಹೊಸಕೋಟೆಯಲ್ಲಿ ಹಮ್ಮಿಕೊಂಡಿರುವ ಪ್ರಶಂಶನೀಯ. ನಗರದಲ್ಲಿ ದಿನೇದಿನೇ ಜನಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ೧ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು ಕಸವೂ ಹೆಚ್ಚು ಉತ್ಪಾದನೆ ಆಗುತ್ತಿದೆ. ಆ ಕಸವನ್ನು ಪೌರ ಕಾರ್ಮಿಕರು ಸ್ವಚ್ಛತಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಗರ ನಾಗರಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಾಗೆಯೇ ೫ ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಬಟ್ಟೆ ಚೀಲಗಳನ್ನು ಬಳಕೆ ಮಾಡಬೇಕು. ಆಗ ಶೇ.70ರಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಹೊಸಕೋಟೆಯನ್ನು ಕಸ ಮುಕ್ತ, ಅಪರಾಧ ಮುಕ್ತ ನಗರವನ್ನಾಗಿ ಮಾಡುವ ಸಂಕಲ್ಪ ಹೊತ್ತಿದ್ದು, ನಮ್ಮ ಸಂಕಲ್ಪಕ್ಕೆ ನಾಗರಿಕರ ಬೆಂಬಲ ಅಗತ್ಯವಾಗಿ ಬೇಕಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಮಾತನಾಡಿ, ಹೊಸಕೋಟೆ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪೌರಕಾರ್ಮಿಕರು ಅವಿರತ ಶ್ರಮಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಡೆಗಟ್ಟಲು ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಿ ಮನೆ ಬಾಗಿಲಿಗೆ ಸ್ವಚ್ಛತಾ ವಾಹಿನಿ ತೆರಳಿ ಕಸ ಸಂಗ್ರಹಣೆ ಮಾಡುತ್ತಿದೆ. ಇದರ ನಡುವೆ ಖಾಸಗಿ ಸಂಸ್ಥೆಗಳು ಕೂಡ ಸ್ವಚ್ಛತಾ ಕಾರ್ಯ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ನಗರದ ಸ್ವಚ್ಛತಾ ದೃಷ್ಠಿಯಿಂದ ಪೌರಕಾರ್ಮಿಕರ ಜೊತೆಗೆ ಪ್ರತಿಯೊಬ್ಬ ನಗರ ನಾಗರಿಕನ ಸಹಕಾರ ಅಷ್ಟೇ ಮುಖ್ಯ ಎಂದು ಹೇಳಿದರು.ಇದೇ ಸಂಧರ್ಭದಲ್ಲಿ ಹೊಸಕೋಟೆ ನಗರದ ಬಸ್ ನಿಲ್ದಾಣ, ಕೆಇಬಿ ವೃತ್ತ, ಜೆಸಿ ವೃತ್ತ ಸೇರಿದಂತೆ ಕೆ.ಆರ್.ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ವೇಳೆ ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ನಗರಸಭೆ ಹೆಲ್ತ್ ಇನ್ಸ್‌ಪೆಕ್ಟರ್ ಆಂಜಿನಪ್ಪ ಸೇರಿದಂತೆ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಅಸೋಸಿಯೇಷನ್ ಸದಸ್ಯರು ಹಾಜರಿದ್ದರು.
ಹೊಸಕೋಟೆಯಲ್ಲಿ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಅಸೋಸಿಯೇಷನ್ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಇತರರು ಪಾಲ್ಗೊಂಡಿದ್ದರು.