ಮದ್ದೂರು ಸಹಕಾರ ಸಂಘ: ಬಾಲರಾಜು ಬೆಂಬಲಿಗರು ಜಯಭೇರಿ

KannadaprabhaNewsNetwork | Published : Mar 19, 2025 12:34 AM

ಸಾರಾಂಶ

ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಶಾಸಕ ಎಸ್.ಬಾಲರಾಜು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಮದ್ದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜು ಬೆಂಬಲಿಗರು ಜಯಭೇರಿ ಬಾರಿಸಿದ್ದಾರೆ.

ಒಟ್ಟು ೧೨ ಜನ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರಲ್ಲಿ ೧೧ ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೆ ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಸಹಕಾರ ಸಂಘದ ಧ್ಯೇಯ ವಾಕ್ಯವಾಗಿರುವ ಸೇವೆಗಾಗಿ ಬಾಳು ತತ್ವದಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ಮದ್ದೂರು ಗ್ರಾಮಕ್ಕೆ ಪ್ರತ್ಯೇಕ ಸಹಕಾರ ಸಂಘ ಮಾಡಬೇಕೆಂಬ ನಿಟ್ಟಿನಲ್ಲಿ ಕಳೆದ ೨೦ ವರ್ಷಗಳಿಂದಲೂ ನಾನು ಪ್ರಯತ್ನಿಸುತ್ತಿದ್ದೆ. ೫ ವರ್ಷಗಳ ಹಿಂದೆ ಇಲ್ಲಿಗೆ ಪ್ರತ್ಯೇಕ ಸಂಘವಾಯಿತು. ನಾನೇ ಇಲ್ಲಿಗೆ ಪ್ರಥಮ ಅಧ್ಯಕ್ಷನಾಗಿ ಆಯ್ಕೆಯಾದೆ. ಆರಂಭವಾದ್ದರಿಂದ ಕೆಲವು ಸಮಸ್ಯೆಗಳು ಬಂದವು. ಈಗ ಅದೆಲ್ಲಾ ನಿವಾರಣೆಯಾಗಿದೆ. ಈ ಚುನಾವಣೆಯಲ್ಲಿ ೫ ಜನರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ ೭ ಕ್ಷೇತ್ರಗಳಲ್ಲಿ ೬ ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತ ಪೂರ್ವ ಗೆಲುವು ಸಾಧಿಸಿ ಒಟ್ಟು ೧೧ ಮಂದಿ ಇದ್ದಾರೆ. ಈ ಗೆಲುವು ನನಗೆ ವೈಯುಕ್ತಿಕವಾಗಿ ಹೊಸ ಬಲವನ್ನು ಕೊಟ್ಟಿದೆ.ಸಂಘವನ್ನು ಮುನ್ನಡೆಸಲು ಅನೇಕ ಸವಾಲುಗಳಿವೆ. ಇದನ್ನು ಲಾಭದತ್ತ ಕೊಂಡೊಯ್ಯುವ ಕೆಲಸ ಮೊದಲು ಆಗಬೇಕು. ಪಡಿತರ ವಿತರಣೆ ಮಾಡುವುದು, ರಸಗೊಬ್ಬರ ಮಾರಾಟ, ಹೊಸದಾಗಿ ಸಾಲ ನೀಡುವ ಮೂಲಕ ಈ ಸಂಘವನ್ನು ಲಾಭದತ್ತ ಕೊಂಡೊಯ್ಯಬೇಕು. ಅಲ್ಲದೆ ಇದಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕು. ಈಗ ಆಯ್ಕೆಯಾಗಿರುವ ನಿರ್ದೇಶಕರು ಸಾರ್ವಜನಿಕರ ಸೇವೆಯೇ ಸಹಕಾರ ಸಂಘದ ತತ್ವದಡಿಯಲ್ಲಿ ಕೆಲಸವನ್ನು ಮಾಡಬೇಕು. ಇಲ್ಲಿರುವ ಸದಸ್ಯರ ಭರವಸೆಗಳನ್ನು ಹುಸಿಗೊಳಿಸಬಾರದು. ಎಲ್ಲರೂ ಒಮ್ಮತದಿಂದ ಸೇರಿ ಸೊಸೈಟಿಯ ಅಭಿವೃದ್ಧಿಗೆ ದುಡಿಯಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಜಗದೀಶ್, ಅಯ್ಯಪ್ಪಸ್ವಾಮಿ, ಚಿಕ್ಕಬಸವಯ್ಯ, ಪುಟ್ಟರಂಗಶೆಟ್ಟಿ, ಬಿ. ಪುಟ್ಟಸ್ವಾಮಿ, ಸತೀಶ್, ನಂಜುಂಡಸ್ವಾಮಿ, ಲಕ್ಷ್ಮಮ್ಮ, ಬಿ.ಎಸ್. ನಾಗರಾಜು, ಡಿ.ಎಂ. ಬೋಸರಾಜು, ಹೊವಮ್ಮ, ಪಿ. ಪುಟ್ಟಮಾದಪ್ಪರನ್ನು ಸನ್ಮಾನಿಸಲಾಯಿತು. ಮುಖಂಡರಾದ ಮದ್ದೂರು ಸೋಮು, ನರೇಂದ್ರ, ಶಾಂತರಾಜು, ಮೂರ್ತಿ, ಮಹದೇವಸ್ವಾಮಿ, ಬೂದಿತಿಟ್ಟು ನಾಗೇಂದ್ರ, ಸಿದ್ದರಾಜು, ಜೀಬಜಾರ್ ಮಹದೇವ, ದೇವರಾಜು ಅನೇಕರು ಇದ್ದರು.

Share this article