ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

KannadaprabhaNewsNetwork |  
Published : Oct 14, 2026, 01:30 AM IST
13ಕೆಎಂಎನ್ ಡಿ18 | Kannada Prabha

ಸಾರಾಂಶ

ಕಬ್ಬು ಬೆಳೆಗೆ ಸೂಕ್ತ ಬೆಲೆ ನೀಡಿ ಬೇಡಿಕೆ ಈಡೇಸುವುದಾಗಿ ಭರವಸೆ ನೀಡಿ ರಾಜ್ಯದ ರೈತರೊಂದಿಗೆ ಮಂಡ್ಯ ಜಿಲ್ಲೆಯ ರೈತರನ್ನು ದೆಹಲಿಗೆ ಕರೆಸಿಕೊಂಡಿರುವ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ರೈತ ಮುಖಂಡರನ್ನು ವಾಪಸ್ ಕಳಿಸಿ ಅವಮಾನ ಮಾಡಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕಬ್ಬು ಬೆಳೆಗೆ ನ್ಯಾಯೋಜಿತ ಮತ್ತು ಲಾಭದಾಯಕ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವೆಡೆ ರೈತರ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಹೆದ್ದಾರಿಯಲ್ಲಿ ಮಲಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆಯಿಂದಾಗಿ ತಾಲೂಕು ಕಚೇರಿ ಮುಂಭಾಗದ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು.

ಕಬ್ಬು ಬೆಳೆಗಾರರ ಬೇಡಿಕೆ ಕುರಿತಂತೆ ದೆಹಲಿಯಲ್ಲಿ ರೈತರ ಜೊತೆ ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಹ್ಲಾದ ಜೋಶಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರುಗಳು ನಡುವೆ ನಡೆದ ರೈತ ಮುಖಂಡರ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ತಾಲೂಕಿನ ರೈತ ಸಂಘದ ಕಾರ್ಯಕರ್ತರು ದಿಢೀರ್ ಪ್ರತಿಭಟನೆಗಿಳಿದು ರಸ್ತೆಯಲ್ಲಿ ಮಲಗುವ ಮೂಲಕ ರಸ್ತೆ ತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು.

ಕಬ್ಬು ಬೆಳೆಗೆ ಸೂಕ್ತ ಬೆಲೆ ನೀಡಿ ಬೇಡಿಕೆ ಈಡೇಸುವುದಾಗಿ ಭರವಸೆ ನೀಡಿ ರಾಜ್ಯದ ರೈತರೊಂದಿಗೆ ಮಂಡ್ಯ ಜಿಲ್ಲೆಯ ರೈತರನ್ನು ದೆಹಲಿಗೆ ಕರೆಸಿಕೊಂಡಿರುವ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ರೈತ ಮುಖಂಡರನ್ನು ವಾಪಸ್ ಕಳಿಸಿ ಅವಮಾನ ಮಾಡಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭುಲಿಂಗ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತುಕತೆ ಹೆಸರಿನಲ್ಲಿ ರೈತರ ಕಣ್ಣಿಗೆ ಮಣ್ಣೆರಚುವ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರತಿಭಟನೆ ವೇಳೆ ರೈತರು ಹಾಗೂ ಪೊಲೀಸರ ನಡುವೆ ರಸ್ತೆ ತಡೆ ನಡೆಸುವ ವಿಚಾರದಲ್ಲಿ ಕೆಲ ಕಾಲ ವಾಗ್ವಾದ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಮೌನಕ್ಕೆ ಶರಣಾಗಿ ಪರಿಸ್ಥಿತಿ ನಿಭಾಯಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ. ಪ್ರಕಾಶ್, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ವಳೆಗೆರೆಹಳ್ಳಿ ಶ್ರೀನಿವಾಸ್, ಕೆ. ನಾಗರಾಜು, ಅರಗಿನ ಮೆಳೆ ರಾಮೇಗೌಡ, ರಾಹುಲ್, ರಾಜೇಶ್, ಶಿವರಾಮು, ಮರಿಲಿಂಗ, ಮಧು, ವೆಂಕಟೇಶ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮನ್ಮುಲ್ ಒಕ್ಕೂಟಕ್ಕೆ ಮುತ್ತಿಗೆ
ಜೀವನದಲ್ಲಿ ಮಹತ್ತರ ಪಾತ್ರ ವಹಿಸುವವರ ದಿನವೇ ಪೋಷಕರ ದಿನಾಚರಣೆ: ಶೃತಿ ಶಿವಣ್ಣ