ಮದ್ದೂರು: ಶ್ರೀರಾಮನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ

KannadaprabhaNewsNetwork | Published : Jan 23, 2024 1:46 AM

ಸಾರಾಂಶ

ಮದ್ದೂರು ಪಟ್ಟಣದಲ್ಲಿ ಪುರಾಣ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮೂಲ ವಿಗ್ರಹಕ್ಕೆ ಮಧು, ಪಂಚಾಮೃತ ಅಭಿಷೇಕದೊಂದಿಗೆ ಪುಷ್ಪಾಲಂಕಾರ ಸೇವೆ. ಹಾಗೇ ಕೋಟೆ ಬೀದಿಯ ಪಟ್ಟಾಭಿರಾಮ ದೇವಾಲಯದಲ್ಲಿ ಸೀತಾರಾಮ ಸಮೇತ ಆಂಜನೇಯ ಮೂಲ ವಿಗ್ರಹಕ್ಕೆ ಅಭಿಷೇಕ. ದೇಗುಲದ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹ.

ಕನ್ನಡಪ್ರಭ ವಾರ್ತೆ ಮದ್ದೂರು

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶ್ರೀ ರಾಮನ ದೇವಾಲಯಗಳಲ್ಲಿ ಹೋಮ ಹವನ ದೊಂದಿಗೆ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನೆರವೇರಿತು.

ಪಟ್ಟಣದ ಶ್ರೀರಾಮ ಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗಿನಿಂದಲೇ ರಾಮ ತಾರಕ ಹೋಮ, ಗಣಪತಿ ಹೋಮ. ನವಗ್ರಹ ಮತ್ತು ಸೀತಾದೇವಿ ಹೋಮದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಪಟ್ಟಣದ ಪುರಾಣ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮೂಲ ವಿಗ್ರಹಕ್ಕೆ ಮಧು, ಪಂಚಾಮೃತ ಅಭಿಷೇಕದೊಂದಿಗೆ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು.

ದೇಗುಲದ ಪ್ರಧಾನ ಅರ್ಚಕ ಪ್ರದೀಪಚಾರ್ಯ ಹಾಗೂ ಸಹ ಅರ್ಚಕ ಸುರೇಶ ಆಚಾರ್ಯ ನೇತೃತ್ವದಲ್ಲಿ ಸೀತಾರಾಮ ಲಕ್ಷ್ಮಣ ಸಮೇತ ತಾಣ ದೇವರನ್ನು ಪ್ರತಿಷ್ಠಾಪನೆ ಮಾಡಿ ದೇಗುಲದ ಆವರಣದಲ್ಲಿ ಸಾಲಂಕೃತ ಉತ್ಸವ ನಡೆಸಲಾಯಿತು. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ, ಧನ್ಯತಾಭಾವ ಮೆರೆದರು.

ಲೀಲಾವತಿ ಬಡಾವಣೆಯ ಪುರಸಭೆ ಉದ್ಯಾನವನದಲ್ಲಿರುವ ಶ್ರೀರಾಮ ಮಂದಿರ, ಹಳೆಯ ಎಂಸಿ ರಸ್ತೆಯ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಕೇಸರಿ ಶಾಲು ಧರಿಸಿದ್ದ ಶ್ರೀರಾಮ ಭಕ್ತರು ರಸ್ತೆ ಇಕ್ಕಲಗಳಲ್ಲಿ ಶ್ರೀರಾಮನ ಭಾವಚಿತ್ರ ಪ್ರತಿಷ್ಠಾಪನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಕೋಸಂಬರಿ ಯೊಂದಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಮಾಡಿದರು.

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರೆವೇರಿದ ಹಿನ್ನೆಲೆಯಲ್ಲಿ ದೇಗುಲ ಮತ್ತು ರಾಮಮಂದಿರಗಳಲ್ಲಿ ಜಮಾಯಿಸಿದ್ದ ಅಸಂಖ್ಯಾತ ಭಕ್ತಾದಿಗಳು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

ದೇಗುಲದ ಆವರಣದಲ್ಲಿ ಅಳವಡಿಸಲಾಗಿದ್ದ ಎಲ್ಇಡಿ ಪರದೆಗಳಲ್ಲಿ ಸುವರ್ಣ ಚಾನೆಲ್‌ನಲ್ಲಿ 12.30 ಸುಮಾರಿಗೆ ಅಯೋಧ್ಯೆಯ ರಾಮಲಿಲ್ಲಾನ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ರಾಮಭಕ್ತರು ಜೈ ಶ್ರೀ ರಾಮ್ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

ಸೀತಾರಾಮ ಲಕ್ಷ್ಮಣ ಸಮೇತ ಉತ್ಸವ ಮೂರ್ತಿ ಪಲ್ಲಕ್ಕಿ ಉತ್ಸವ

ಮದ್ದೂರು ಪಟ್ಟಣದ ಕೋಟೆ ಬೀದಿಯ ಪಟ್ಟಾಭಿರಾಮ ದೇವಾಲಯದಲ್ಲಿ ಅಯೋಧ್ಯೆಯ ಬಾಲರಾಮ ಪ್ರತಿಷ್ಠಾಪನ ಅಂಗವಾಗಿ ಸೀತಾರಾಮ ಸಮೇತ ಆಂಜನೇಯ ಮೂಲ ವಿಗ್ರಹಕ್ಕೆ ಅಭಿಷೇಕದೊಂದಿಗೆ ಪುಷ್ಪಲಂಕಾರ ಸೇವೆ ನೆರವೇರಿಸಲಾಯಿತು.

ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಶಾಮಿಯಾನ ತಮ್ಮಣ್ಣ ಹಾಗೂ ಸ್ನೇಹಿತರ ತಂಡ ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಿದರು. 1992ರಲ್ಲಿ ನಡೆದ ಅಯೋಧ್ಯೆಯ ಕರ ಸೇವೆ ಸಂದರ್ಭದಲ್ಲಿ ಶಂಕುಸ್ಥಾಪನೆಗೊಂಡು ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥ ಶ್ರೀಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿದ್ದ ಶಿವಪುರದ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ಸೀತಾರಾಮ ಲಕ್ಷ್ಮಣ ಸಮೇತ ಶ್ರೀಆಂಜನೇಯ ಮೂರ್ತಿಗೆ ಅಭಿಷೇಕ ಪುಷ್ಪಾಲಂಕಾರ ಸೇವೆಯೊಂದಿಗೆ ವಿಶೇಷ ಪೂಜಾ ಜರುಗಿದವು. ದೇಗುಲದ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳ ಮೂಲಕ ಶಿವಪುರದವರೆಗೆ ಸೀತಾರಾಮ ಲಕ್ಷ್ಮಣ ಸಮೇತ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪುಷ್ಪಾಲಕೃತ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Share this article