ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದು ಹಲವು ಮಹಿಳೆಯರು ಅಸ್ವಸ್ಥ ಗೊಂಡ ಘಟನೆ ಜರುಗಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮದ್ದೂರು- ಮಳವಳ್ಳಿ ರಾಜ್ಯ ಹೆದ್ದಾರಿಗೆ ಇಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹೆದ್ದಾರಿಯಲ್ಲಿ ಸುಮಾರು 23 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು.
ಗೊರವನಹಳ್ಳಿ ಗ್ರಾಮದ ಮಹಿಳೆಯರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಗೆಜ್ಜಲಗೆರೆ ಗ್ರಾಮದಲ್ಲಿ ರೈತರು ಹಾಗೂ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಎರಡು ಗ್ರಾಮಗಳ ನಡುವೆ ಬಿಗುವಿನ ಪರಿಸ್ಥಿತಿ ಉಂಟಾಗಿದೆ.ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ಕಳೆದ 60 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 4 ಗಂಟೆ ಸುಮಾರಿಗೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಗೊರವನಹಳ್ಳಿ ಗ್ರಾಪಂ ಕಚೇರಿಗೆ ಆಗಮಿಸಿದ ತಾಪಂ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ನಗರಸಭೆಗೆ ಸೇರಿದ ಕಡತಗಳನ್ನು ಸಾಗಿಸಲು ಮುಂದಾದರು.
ಈ ವೇಳೆ ಪೊಲೀಸರು ಹೆದ್ದಾರಿ ತಡೆ ಮಾಡುತ್ತಿದ್ದ ಮುಖಂಡರು, ಮಹಿಳೆಯರ ನಡುವೆ ತಳ್ಳಾಟ ನೂಕಾಟ ನಡೆಸಿದರು. ಈ ವೇಳೆ ಗ್ರಾಮದ ಶೋಭಾ ಸೇರಿದಂತೆ ಮೂವರು ಮಹಿಳೆಯರು ಅಸ್ವಸ್ಥಗೊಂಡರು. ನಂತರ ಅಸ್ವಸ್ಥಗೊಂಡ ಮಹಿಳೆಯರನ್ನು ಆಂಬುಲೆನ್ಸ್ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು.
ನಂತರ ಸ್ಥಳಕ್ಕೆ ಧಾವಿಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ರೈತ ನಾಯಕಿ ಸುನಂದಾ ಜಯರಾಂ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು. ನಂತರ ಪೊಲೀಸರನ್ನು ತರಾಟೆ ತೆಗೆದುಕೊಂಡರು.
ಘಟನೆ ಹಿನ್ನೆಲೆಯಲ್ಲಿ ಎಎಸ್ಪಿಗಳಾದ ಎ.ಇ.ಗಂಗಾಧರಸ್ವಾಮಿ, ತಿಮ್ಮಯ್ಯ, ಡಿವೈಎಸ್ಪಿ ಲಕ್ಷ್ಮಿನಾರಾಯಣಪ್ರಸಾದ್ , ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು , ನೂರಕ್ಕು ಹೆಚ್ಚು ಪೊಲೀಸರನ್ನು ನಿಯೋಜಿಸಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
- ನಗರಸಭೆಗೆ ಗ್ರಾಪಂಗಳ ಸೇರ್ಪಡೆ ಕಡತ ಸಾಗಿಸಲು ಮುಂದಾದ ನಗರಸಭೆ, ತಾಪಂ ಅಧಿಕಾರಿಗಳು- ತಡೆಯಲು ಹೋದ ಗ್ರಾಮಸ್ಥರ ಮೇಲೆ ಪೊಲೀಸರಿಂದ ಮಾತಿನ ಚಕಮಕಿ
- ಹಲವರ ಬಂಧನ, ಬಿಡುಗಡೆ, ಪೊಲೀಸರ ಕ್ರಮಕ್ಕೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿ ಹಲವರ ಆಕ್ರೋಶ