ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಹಾಶಿವರಾತ್ರಿ ಹಬ್ಬಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಕಾರ್ಯದರ್ಶಿ ಎ ಈ ರಘು ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.ಮಲೆ ಮಾದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಹಬ್ಬದಲ್ಲಿ ಬರುವ ತಾಯಂದಿರಿಗೆ ಮಗುವಿಗೆ ಹಾಲುಣಿಸುವ ಕೇಂದ್ರವನ್ನು ಸಹ ಮೊದಲ ಬಾರಿಗೆ ಪ್ರಾಧಿಕಾರ ತೆರೆದಿರುವುದು ಮಲೆ ಮಾದೇಶ್ವರನ ಭಕ್ತರಲ್ಲಿ ಸಂತೋಷ ತಂದಿದೆ. ಜೊತೆಗೆ ಶ್ರೀ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆಯಲು ಬಿಸಿಲು ಸೆಕೆ ಇರುವುದರಿಂದ ಅಲ್ಲಲ್ಲಿ ಫ್ಯಾನ್ ಮತ್ತು ನೆರಳಿನ ವ್ಯವಸ್ಥೆ ಸಹ ಕಲ್ಪಿಸಿದ್ದಾರೆ.ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ದಾಸೋಹ ಭವನಕ್ಕೆ ಭೇಟಿ ನೀಡಿ ಮಾದಪ್ಪನ ಭಕ್ತರ ಜೊತೆ ಕುಳಿತು ಪ್ರಸಾದ ಸೇವಿಸುವ ಮೂಲಕ ಪರಿಶೀಲನೆ ನಡೆಸಿದ ಅವರು ದಾಸೋಹ ಭವನದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಊಟ ತಿಂಡಿ ಸಹ ಬದಲಾವಣೆ ಮಾಡಿ ಭಕ್ತರಿಗೆ ನೀಡುವಂತೆ ಸಲಹೆ ನೀಡಿದ್ದಾರೆ.ಕುಡಿಯುವ ನೀರಿನ ಘಟಕಗಳ ಪರಿಶೀಲನೆ:ಬರ ಬಿಸಿಲಿನಲ್ಲಿ ದಣಿದು ಬರುವ ಮಲೈ ಮಾದಪ್ಪನ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ತಲೆ ದೂರದಂತೆ ಅಧಿಕಾರಿ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಮಲೆ ಮಾದೇಶ್ವರ ಬೆಟ್ಟ ಧಾರ್ಮಿಕ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾ ವಿಶೇಷ ದಿನದಲ್ಲಿ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಜೊತೆಗೆ ಪ್ಲಾಸ್ಟಿಕ್ ಮುಕ್ತ ಗೊಳಿಸಲು ಭಕ್ತರು ಸಹಕಾರ ನೀಡಬೇಕು.ಎ.ಈ. ರಘು ಕಾರ್ಯದರ್ಶಿ, ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ