ಮೈಸೂರು : ರಾಜಕೀಯವಾಗಿ ಸಂಘರ್ಷವಿದ್ದರೂ ಹಿಂದೂ ಧರ್ಮ ರಕ್ಷಣೆಯಲ್ಲಿ ಮೈಸೂರು ಸಂಸ್ಥಾನ ಹಾಗೂ ಮರಾಠ ಸಾಮ್ರಾಜ್ಯದ ನಡೆ ಒಂದೇ ಆಗಿತ್ತು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಜೆ.ಎಲ್.ಬಿ ರಸ್ತೆಯ ಮಾಧವ ಕೃಪಾದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಶ್ರೀ ಜನಜಾಗರಣ ಟ್ರಸ್ಟ್ ಮೈಸೂರು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಕಾ.ಶ್ರೀ.ನಾಗರಾಜ್ ರಚಿತ ವಿಜಯೀ ಮಹಾರಾಜಾಧಿರಾಜ ಕೃತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಚಿಕ್ಕದೇವರಾಜ ಒಡೆಯರ್ ಕಾಲದಲ್ಲೇ, ಶಿವಾಜಿಯವರು ಮರಾಠ ಸಾಮ್ಯಾಜದ ಆಳ್ವಿಕೆ ನಡೆಸುತ್ತಿದ್ದರು. ಚಿಕ್ಕದೇವರಾಜ ಒಡೆಯರ್ ತಮ್ಮದೇ ವರ್ಚಸ್ಸಿನಲ್ಲಿ ಮೈಸೂರು ಸಂಸ್ಥಾನ ವಿಸ್ತರಣೆ, ಅಭಿವೃದ್ಧಿಯಲ್ಲಿ ತೊಡಗಿದರೆ, ಶಿವಾಜಿಯವರು ಮರಾಠ ಸಾಮ್ರಾಜ್ಯ ವಿಸ್ತರಣೆ ಮತ್ತು ಅಭಿವೃದ್ಧಿ ಮಾಡುತ್ತಿದ್ದರು. ಮರಾಠರ ಆಳ್ವಿಕೆಯ ಕಾಲದಲ್ಲಿ ದಕ್ಷಿಣ ಕರ್ನಾಟಕದ ಜೊತೆಗೆ ಯಾವಾಗಲೂ ಸಂಘರ್ಷ ನಡೆಯುತ್ತಿತ್ತು.
ಶಾಂತಿಯ ಸಂಬಂಧ ಇರಲಿಲ್ಲ. ರಾಜಕೀಯವಾಗಿ ಸಂಘರ್ಷವಿದ್ದರೂ ಧಾರ್ಮಿಕವಾಗಿ ಇಬ್ಬರು ಮಹನೀಯರ ನಡೆ ಒಂದೇ ಆಗಿತ್ತು ಎಂದು ಅವರು ತಿಳಿಸಿದರು.ಹಿಂದೂ ಧರ್ಮ ಸ್ಥಾಪನೆ, ರಕ್ಷಣೆ ವಿಷಯದಲ್ಲಿ ಚಿಕ್ಕದೇವರಾಜ ಒಡೆಯರ್ ಮತ್ತು ಶಿವಾಜಿ ಅವರನ್ನು ಪ್ರಶ್ನಿಸುವಂತಿಲ್ಲ. ಅವರ ತ್ಯಾಗವನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೂ ಧರ್ಮದ ರಕ್ಷಣೆ, ಪಾಲನೆ ಮಾಡುವಲ್ಲಿ ನಾವೆಲ್ಲರೂ ಯೋಚಿಸಬೇಕು ಎಂದರು.ಶಿವಾಜಿ ಅವರು ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದರು ಎಂಬ ಉಲ್ಲೇಖವಿದ್ದು, ಶಿವಾಜಿ ಮಹಾರಾಜರ ಇತಿಹಾಸದ ಮಾಹಿತಿಯುಳ್ಳ ವಿಜಯೀ ಮಹಾರಾಜಾಧಿರಾಜ ಎಲ್ಲರ ಕೈಗೆ ತಲುಪಲಿ ಎಂದು ಆಶಿಸಿದರು.
ಆರ್.ಎಸ್.ಎಸ್ ನ ಜೇಷ್ಠ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಶಿವಾಜಿ ಮಹಾಮಹಿಮರ ವ್ಯಕ್ತಿತ್ವದ ಜೊತೆಗೆ ಅವರ ನಿಧನದ ನಂತರವೂ ಮರಾಠ ಸಾಮ್ರಾಜ್ಯವನ್ನು ಉಳಿಸಿಕೊಂಡು ಬಂದವರ ಇತಿಹಾಸವನ್ನು ಈ ಕೃತಿ ಅನಾವರಣಗೊಳಿಸಿದೆ. ಅರವತ್ತಾದರೆ ಅರಳು-ಮರುಳು ಎಂಬುದು ವಾಡಿಕೆ ಮಾತಷ್ಟೇ. ಜೀವಮಾನ ಸಾಧನೆ ಮಾಡಿದವರ ಪಟ್ಟಿನಲ್ಲಿ ಹೆಚ್ಚಿನವರು ಅರವತ್ತರ ನಂತರವೇ ಮಾಡಿರುವುದು. ಹಾಗಾಗಿ ಅರವತ್ತು ವರ್ಷವೆಂಬ ಬಳಲಿಕೆಯ ದೌರ್ಬಲ್ಯಕ್ಕೆ ಒಳಗಾಗುವುದು ಬೇಡ. ಅರಳು-ಮರಳು ಎಂಬ ಕೃತಕ ಕಾಯಿಲೆಗೆ ಬಲಿಯಾಗದೆ ಮರಳಿ ಅರಳಿರುವ ಕಾ.ಶ್ರೀ.ನಾಗರಾಜ್ ಅವರಿಗೆ ಬರವಣಿಯೇ ವಿಷನ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಲೇಖಕ ಕಾ.ಶ್ರೀ.ನಾಗರಾಜ್, ಅಂಕಣಕಾರ ರಂಗನಾಥ್ ಇದ್ದರು.