ಕನ್ನಡಪ್ರಭವಾರ್ತೆ ಮದ್ದೂರು
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ 60ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಡಿ.27ರಂದು ಬೃಹತ್ ಆರೋಗ್ಯ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪದ್ಮ ಜಿ.ಮಾದೇಗೌಡ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಹೇಶ್‌ಕುಮಾರ್ ಸೋಮವಾರ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ಮಧು ಜಿ.ಮಾದೇಗೌಡ ಅಭಿಮಾನಿಗಳ ಬಳಗ, ಆಶಯ್‌ಮಧು ಅಭಿಮಾನಿ ಬಳಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ, ಆಸ್ಟರ್ ಜಿ ಮಾದೇಗೌಡ ಆಸ್ಪತ್ರೆ, ಬೆಂಗಳೂರು ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರವನ್ನು ಡಿಎಚ್‌ಒ ಡಾ.ಕೆ.ಮೋಹನ್ ಉದ್ಘಾಟಿಸುವರು. ತಹಸೀಲ್ದಾರ್ ಡಾ.ಸ್ಮಿತಾರಾಮ್, ಟಿಎಚ್ ಒ ರವೀಂದ್ರ ಬಿ.ಗೌಡ, ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ್, ವೆಂಕಟೇಗೌಡ ಪಾಲ್ಗೊಳ್ಳಲಿದ್ದಾರೆ.ಶಿಬಿರದಲ್ಲಿ ಜಿ.ಮಾದೇಗೌಡ ಆಸ್ಟತ್ರೆ ಜನರಲ್ ಮೆಡಿಷನ್ ವೈದ್ಯರು, ಮೂಳೆ ಮತ್ತು ಕೀಲು ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಮಕ್ಕಳ, ಹೃದಯ, ದಂತ, ಮೂತ್ರಪಿಂಡ, ಕಿವಿ, ಮೂಗು, ಗಂಟಲು, ಚರ್ಮ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಉದರ ಮತ್ತು ಕರಳು ಶಸ್ತ್ರ ಮತ್ತು ನೇತ್ರ ಚಿಕಿತ್ಸಕರು ಮತ್ತು ವೈದ್ಯಕೀಯ ಕಾಲೇಜಿನ ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸೆ ಮತ್ತು ಪಿಜಿಯೋ ಥರಪಿ ವೈದ್ಯರುಗಳ ತಂಡ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷೆ ನಡೆಸಿ ಸಲಹೆ ಸೂಚನೆಗಳನ್ನು ನೀಡುವರು ಎಂದರು.
ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಉಚಿತ ಆರೋಗ್ಯ ಕಿಟ್, ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಜನರು ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರುಗಳಿಂದ ಚಿಕಿತ್ಸೆ ಮತ್ತು ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಭಾರತೀ ಹೆಲ್ತ್ ಸೈನ್ಸ್‌ನ ನಿರ್ದೇಶಕ ತಮಿಜ್‌ಮಣಿ, ಆಸ್ಟರ್ ಜೀ ಮಾದೇಗೌಡ ಆಸ್ಪತ್ರೆ ಮಾರ್ಕೇಟಿಂಗ್ ಮ್ಯಾನೇಜರ್ ಅನೀಲ್, ಅಣ್ಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಸಿದ್ದಪ್ಪ, ತಾಪಂ ಮಾಜಿ ಸದಸ್ಯ ಚಿಕ್ಕಮರಿಯಪ್ಪ, ಎನ್.ಕೆ.ಭರತೇಶ್, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಗೋಪಿ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗದ ಕೆ.ಪಿ.ಶ್ರೀಧರ, ಸೊಳ್ಳೆಪುರ ರಮೇಶ್, ಭಾರತೀ ವಿದ್ಯಾಸಂಸ್ಥೆಯ ಗಣೇಶ್ ಇದ್ದರು.