ಕನ್ನಡಪ್ರಭ ವಾರ್ತೆ ಮಧುಗಿರಿ
ಸೋದರತ್ವ,ಮಾನವೀಯತೆ ಮೈಗೂಡಿಸಿಕೊಂಡಿರುವ ಮಧುಗಿರಿಯ ಜನ ಶಾಂತಿ ಪ್ರಿಯರು, ಉಭಯ ಜನಾಂಗದ ಹಬ್ಬ ಹರಿ ದಿನಗಳಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿ ಕೊಡದೇ ಪ್ರೀತಿ, ಸ್ನೇಹದಿಂದ ವರ್ತಿಸಿ ಪರಸ್ಪರರು ಆಚರಿಸಿಕೊಂಡು ಶಾಂತಿ ಕಾಪಾಡುವುದೇ ನಮ್ಮ ಧ್ಯೇಯ ಎಂದು ಮಧುಗಿರಿ ಪುರಸಭೆ ಅಧ್ಯಕ್ಷ ಜಿ.ಎ.ಮಂಜುನಾಥ್ ತಿಳಿಸಿದರು.ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಗಣೇಶೋತ್ಸವ -ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಧುಗಿರಿಯಲ್ಲಿ ಉಭಯ ಸಮುದಾಯದವರು ಆಚರಿಸುವ ಹಬ್ಬಗಳಲ್ಲಿ ಪರಸ್ಪರು ಪಾಲ್ಗೊಳ್ಳುವುದರ ಜೊತೆಗೆ ಕೋಮು ಸೌರ್ಹಾದತೆ ಕಾಪಾಡಿದ್ದೇವೆ. ಯಾವುದೇ ಕಾರಣಕ್ಕೂ ಸಣ್ಣ ಗಲಭೆಯ ಸಹ ಆಗದ ರೀತಿ ಹಬ್ಬಗಳನ್ನು ನಡೆಸುತ್ತೇವೆ ಮಧುಗಿರಿ ಸರ್ವ ಜನಾಂಗದ ಶಾಂತಿಯ ತೋಟ ಎಂದು ಊರಿನ ಜನರ ಪರವಾಗಿ ಭರವಸೆ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು ಮಾತನಾಡಿ, ಕಳೆದ 18 ವರ್ಷಗಳಿಂದ ಶ್ರೀವಿದ್ಯಾಗಣಪತಿ ಮಹಾ ಮಂಡಳಿಯಿಂದ ಜಾತ್ಯಾತೀತ, ಪಕ್ಷತೀತಾವಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದು ಮುಸ್ಲಿಂ ಬಾಂಧವರು ಸಹ ಉತ್ಸವದಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಊರಿಗ ಒಳ್ಳೆಯ ಹೆಸರು ತರುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಜಿ.ನಾರಾಯಣರಾಜು ಮಾತನಾಡಿ, ಮಧಗಿರಿ ಪಟ್ಟಣದಲ್ಲಿ ನಡೆಯುವ ಮೆರವಣಿಗೆಗಳಿಗೆ ಎಲ್ಲ ಧರ್ಮದವರು ಸಹಕರಿಸುತ್ತಾರೆ. ಪುರಸಭಾ ಅಧ್ಯಕ್ಷರಾಗಿದ್ದ ಅಯೂಬ್ ಗಣೇಶೋತ್ಸವದ ಮುಂದಾಳತ್ವ ವಹಿಸಿ ನಡೆಸಿ ಕೊಟ್ಟಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಅಲ್ಲದೆ ಗಣಪತಿಗೆ ಶಾಶ್ವತ ಪೆಂಡಾಲ್ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದ ಪುರಸಭಾ ಸದಸ್ಯರುಗಳು ವೈಯಕ್ತಿಕ ದೇಣಿಗೆ ಘೋಷಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.ಬಾಬು ಫಕ್ರುದ್ದಿನ್ ಮಾತನಾಡಿ, ಮಧುಗಿರಿ ಇತಿಹಾದಲ್ಲಿ ಎಂದಿಗೂ ಜನಾಂಗದ ನಡುವೆ ಅಹಿತಕರ ಘಟನೆಗಳು ಎಂದು ಕಂಡಿಲ್ಲ,ಎಲ್ಲರೂ ಪರಸ್ಪರ ಅರಿತು ಬೆರೆತು ಹಬ್ಬ ಆಚರಿಸೋಣ ಎಂದರು.
ಡಿವೈಎಸ್‌ಪಿ ರಾಮಚಂದ್ರಪ್ಪ ಮಾತನಾಡಿ, ಮಧುಗಿರಿಯ ಇತಿಹಾಸದಲ್ಲಿಯೇ ಯಾವುದೇ ಅವಘಡಗಳು ನಡೆದಿರುವ ಉದಾಹರಣೆಗಳಿಲ್ಲ, ಮುಂದೆಯೂ ಇದನ್ನು ಪಾಲಿಸುವಂತೆ ಜನತೆಗೆ ಮನವಿ ಮಾಡಿದರಲ್ಲದೆ ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಸಿ ಇಲಾಖೆಯ ಸೂಚನೆಗಳನ್ನು ಪ್ರತಿಯೊಬ್ಬರು ಪಾಲಿಸಿ ಶಾಂತಿ ಕಾಪಾಡುವಂತೆ ಕರೆಯಿತ್ತರು.ಸಭೆಯಲ್ಲಿ ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ಮುತ್ತುರಾಜ್, ಶ್ರೀವಿದ್ಯಾಗಣಪತಿ ಮಹಾಮಂಡಳಿಯ ದೋಲಿಬಾಬು,ಜಿ.ಆರ್.ಧನ್‌ಪಾಲ್, ಗಣೇಶ್, ಎಂಎಸ್‌ಬಿಆರ್‌ಪಿ ಕುಮಾರ್, ಸಾಧಿಕ್ ಸಾಜು, ಸೇರಿದಂತೆ ಅನೇಕರಿದ್ದರು.