ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹೇಮಗಿರಿ ತಪ್ಪಲಿನಲ್ಲಿ ಇರುವ ಓಡೇ ಭೈರವನ ಸನ್ನಿಧಿಯಲ್ಲಿ ಸಾಂಪ್ರದಾಯಕವಾಗಿ ಬಾಯಿ ಕವಳ, ಭಂಗಿ ಸೇವೆ ನಡೆಯಿತು. ಮಂಡ್ಯ ತುಮಕೂರು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಂಡರು.ಓಡೇ ಭೈರವನ ಸನ್ನಿಧಿಯಲ್ಲಿ ಮದ್ಯ ಸೇವನೆ ಮಾಡುವುದು ವಿಶೇಷ. ಈ ನೆಲೆಯಲ್ಲಿ ಬೆಳಿಗ್ಗೆ ದೇವಾಲಯಕ್ಕೆ ವಿಶೇಷವಾದ ಪೂಜೆ ಹಾಗೂ ದೇವರ ವಿಗ್ರಹಕ್ಕೆ ವಿಶೇಷವಾದ ಅಭಿಷೇಕ ಅಲಂಕಾರ ನಡೆದವು. ನಂತರ ದೇವಾಲಯದ ಕೆಳಭಾಗದಲ್ಲಿ ಇಡಲಾಗಿದ್ದ ಬೃಹತ್ ಡ್ರಮ್‌ಗಳಲ್ಲಿ ಭಕ್ತರು ತಂದಿದ್ದ ವಿಸ್ಕಿ, ಬ್ರಾಂದಿ, ಜಿನ್ ಸೇರಿದಂತೆ ಹಲವಾರು ವಿವಿಧ ಮದ್ಯದ ಬಾಟಲುಗಳನ್ನು ಸುರಿದು ಎಲ್ಲವನ್ನೂ ಕೂಡ ಮಿಶ್ರಣಗೊಳಿಸಿ ಭಕ್ತರಿಗೆ ಸರತಿ ಸಾಲಿನಲ್ಲಿ ಕೂರಿಸಿ ಬಿರಿಯಾನಿ ಚಿಕನ್, ಮಟನ್ ಜೊತೆ ಕಡ್ಲೆಪುರಿ ಹಾಗೂ ಎಣ್ಣೆಯನ್ನು ನೀಡಲಾಯಿತು. ಅಣ್ಣ, ತಮ್ಮ, ಅಕ್ಕ, ತಂಗಿ, ಅಪ್ಪ, ಮಗ, ಪುರುಷ, ಮಹಿಳೆ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಕೂಡ ಒಟ್ಟಾಗಿ ಸರತಿ ಸಾಲಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಓಡೇ ಭೈರವನ ಕೃಪೆಗೆ ಪಾತ್ರರಾದರು. ಸ್ಥಳೀಯರು ಹೇಳುವಂತೆ ಹಲವಾರು ದಶಕಗಳ ಹಿಂದೆ ಈ ರೀತಿ ಕಾರ್ಯಕ್ರಮವನ್ನು ಆರಂಭಿಸಿದ್ದು ಈಗಲೂ ಕೂಡ ನಡೆಯುತ್ತಾ ಬಂದಿದೆ. ಇದಕ್ಕೆ ಬಾಯಿ ಕವಳ ಅಥವಾ ಭಂಗಿ ಸೇವೆ ಎಂದು ಕರೆಯುತ್ತಾರೆ. ಹೇಮಗಿರಿ ಬೆಟ್ಟದ ತಪ್ಪಲಿನ ಸುತ್ತಲೂ 7 ಕಿ.ಮೀ ಸಿದ್ಧರ ವಾಸ ಸ್ಥಳವಾಗಿದೆ. ಇಲ್ಲಿನ ಹಲವಾರು ಗುಡ್ಡ ಪ್ರದೇಶಗಳಲ್ಲಿ ಸಿದ್ಧರು ಇಂದಿಗೂ ಕೂಡ ಜೀವಂತವಾಗಿ ವಾಸಿಸುತ್ತಿದ್ದಾರೆ ಎಂಬ ನಂಬಿಕೆಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಸತ್ತ ದೇಹಗಳನ್ನು ಸುಟ್ಟರೆ ತಲೆ ಸಿಡಿಯುವುದಿಲ್ಲ ಎಂದು ಇಲ್ಲಿನ ವಾಸಿಗಳು ಹೇಳುತ್ತಾರೆ. ಈ ಭಾಗದ ಹಲವಾರು ಬೆಟ್ಟ ಗುಡ್ಡಗಳಲ್ಲಿ ಸಿದ್ಧರು ವಾಸಿಸುತ್ತಿದ್ದು ಸಂಕ್ರಾಂತಿ ನಂತರ ಹೇಮಗಿರಿ ಜಾತ್ರೆ ಮುಗಿದ ಬಳಿಕ ಓಡೇ ಭೈರವನಿಗೆ ನಡೆಯುವ ಭಂಗಿ ಸೇವೆಯ ನಂತರ ರಾತ್ರಿ ಎಲ್ಲರೂ ಕೂಡ ಒಟ್ಟಾಗಿ ಸೇರುತ್ತಿದ್ದರು. ಇಲ್ಲಿ ತಮ್ಮದೇ ಆದ ಔತಣ ಮಾಡುತ್ತಾರೆ. ಅದಕ್ಕಾಗಿ ರಾತ್ರಿ ವೇಳೆ ಸಾರ್ವಜನಿಕರ ಪ್ರವೇಶ ನಿಷಿದ್ಧ ಎಂದರು.