ಒಳಮೀಸಲಾತಿ ಜಾರಿಗೆ ಮಾದಿಗ-ಛಲವಾದಿ ಜಂಟಿ ಕಹಳೆ

KannadaprabhaNewsNetwork | Updated : Oct 24 2024, 12:34 AM IST

ಸಾರಾಂಶ

ಸುಪ್ರೀಂ ಕೋರ್ಟ್ ತೀರ್ಪು ಅನ್ವಯ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಮಾದಿಗ-ಛಲವಾದಿ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

- ಸುಪ್ರೀಂ ಕೋರ್ಟ್ ಆದೇಶದಂತೆ ತಕ್ಷಣ ಒಳಮೀಸಲಾತಿ ಕಲ್ಪಿಸಲು ಉಭಯ ಸಮುದಾಯಗಳ ಒಕ್ಕೊರಲ ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸುಪ್ರೀಂ ಕೋರ್ಟ್ ತೀರ್ಪು ಅನ್ವಯ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಮಾದಿಗ-ಛಲವಾದಿ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್‌ ಪುತ್ಥಳಿಗೆ ಒಕ್ಕೂಟ ಮುಖಂಡರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಉಭಯ ಸಮಾಜ ಬಾಂಧವರು, ಅಲ್ಲಿಂದ ಅಶೋಕ ರಸ್ತೆ, ಗಾಂಧಿ ವೃತ್ತ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮುಖಂಡರು ಮಾತನಾಡಿ, ಜನಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸಿ 30 ವರ್ಷದಿಂದ ಮಾದಿಗ ಸಮುದಾಯದ ನಿರಂತರ ಹೋರಾಟ ನಡೆಸಿದೆ. ಇದರ ಫಲವಾಗಿ ಈಗ ಒಳ ಮೀಸಲಾತಿ ಸಿಗುವ ಕಾಲ ಬಂದಿದೆ. ಸುಪ್ರೀಂ ಕೋರ್ಟ್ ಆ.1ರಂದು ಒಳಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂಬುದಾಗಿ ಸ್ಪಷ್ಟವಾಗಿ ಹೇಳಿದೆ. ಅದರಂತೆ ರಾಜ್ಯ ಸರ್ಕಾರ ತಕ್ಷಣ ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧರಿಸಿ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ನಮಗೆ ಬೇಕಾಗಿರುವುದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನಂತೆ ಒಳ ಮೀಸಲಾತಿ ಕಲ್ಪಿಸುವುದಾಗಿದೆ. ಅಲ್ಲಿವರೆಗೆ ರಾಜ್ಯದಲ್ಲಿ ನಡೆಯುವ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕು. ಹಣಕಾಸು ಮತ್ತಿತರೆ ಸೌಲಭ್ಯಗಳನ್ನು ನಿಲ್ಲಿಸಬೇಕು. ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಒಳಗೊಂಡಂತೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟಗಳ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ನಿವೃತ್ತ ಪೊಲೀಸ್ ಅಧೀಕ್ಷಕರಾದ ರವಿನಾರಾಯಣ, ಎನ್.ರುದ್ರಮುನಿ, ನಿವೃತ್ತ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋತ್ತಮ, ಎಂ.ಆರ್. ಹಲಸಂಗಿ, ಆಲೂರು ನಿಂಗರಾಜ, ಎಂ.ಹಾಲೇಶ, ಸೋಮಲಾಪುರ ಹನುಮಂತಪ್ಪ, ಎನ್.ನೀಲಗಿರಿಯಪ್ಪ, ಹೆಗ್ಗೆರೆ ರಂಗಪ್ಪ, ಕೆ.ಎಸ್‌. ಗೋವಿಂದರಾಜ, ಪಾಲಿಕೆ ಸದಸ್ಯರಾದ ಉದಯಕುಮಾರ, ಎಲ್.ಎಂ.ಎಚ್.ಸಾಗರ್, ಎಚ್.ಮಲ್ಲೇಶ, ಬಿ.ಎಂ.ನಿರಂಜನ, ಹಿರಿಯ ಪತ್ರಕರ್ತ ಕೆ.ಏಕಾಂತಪ್ಪ, ಎಸ್.ಮಲ್ಲಿಕಾರ್ಜುನ, ಎಚ್.ಕೆ.ಬಸವರಾಜ, ಕುಂದುವಾಡ ಮಂಜುನಾಥ, ನಾಗಭೂಷಣ, ಓಂಕಾರಪ್ಪ, ಸೋಮಲಾಪುರ ಹನುಮಂತಪ್ಪ, ಪತ್ರಕರ್ತರಾದ ಡಾ.ಬಿ.ವಾಸು ದೇವ, ಕುಣಿಬೆಳಕೆರೆ ಸುರೇಶ, ಎಸ್.ಶೇಖರಪ್ಪ ಇತರರು ಇದ್ದರು.

- - -

ಕೋಟ್‌ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ, ಕೆಲ ಸಮುದಾಯಗಳ ನಾಯಕರು ಇದಕ್ಕೆ ಅಡ್ಡಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಪ್ಪು ಮಾಹಿತಿ ನೀಡಿ, ತಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಸಿಎಂ ಯಾವುದೇ ಒತ್ತಡಕ್ಕೂ ಮಣಿಯದೇ ಒಳ ಮೀಸಲಾತಿ ಜಾರಿಗೊಳಿಸಲಿ. ಆಗ ದಲಿತ ಸಮುದಾಯಗಳ ಮನದಲ್ಲಿ ಉಳಿಯುತ್ತಾರೆ. ಇಲ್ಲವಾದರೆ, ಮುಂದಿನ ಚುನಾವಣೆಯಲ್ಲಿ ದಲಿತರು ತಕ್ಕ ಪಾಠ ಕಲಿಸುತ್ತಾರೆ

- ಪಿ.ಗುರುಮೂರ್ತಿ, ಮುಖಂಡ, ಡಿಎಸ್‌ಎಸ್‌

- - -

ಟಾಪ್‌ ಕೋಟ್‌ ಶಾಂತಿಯುತ ಹೋರಾಟ ನಡೆಸಿದರಷ್ಟೇ ಸಾಲದು. ರಾಜ್ಯಾದ್ಯಂತ ಮಾದಿಗ-ಛಲವಾದಿ ಸಮುದಾಯಗಳು ಬೀದಿಗಳಿದು ಉಗ್ರ ರೂಪದ ಹೋರಾಟ ನಡೆಸಬೇಕು. ರೈಲು ತಡೆ, ಬಸ್‌ ತಡೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆ ಸೇರಿದಂತೆ ಆಂದೋಲನದ ರೂಪದಲ್ಲಿ ಮಾದಿಗ-ಛಲವಾದಿಗಳ ಒಳ ಮೀಸಲಾತಿ ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗಬೇಕಿದೆ. ಮೂರು ದಶಕಗಳ ನಮ್ಮ ಹೋರಾಟ ಇನ್ನು ಮುಂದೆ ತೀವ್ರ ಸ್ವರೂಪ ಪಡೆಯುವ ದಿನಗಳೂ ದೂರವಿಲ್ಲ

- ಎಂ.ಹಾಲೇಶ, ಮಾಜಿ ಸದಸ್ಯ, ಮಹಾನಗರ ಪಾಲಿಕೆ

- - - -23ಕೆಡಿವಿಜಿ2, 3, 4, 5:

ದಾವಣಗೆರೆಯಲ್ಲಿ ಮಂಗಳವಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವಂತೆ ಜಿಲ್ಲಾ ಮಾದಿಗ-ಛಲವಾದಿ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆ.

Share this article