ವೀರಭದ್ರಪ್ಪರಿಗೆ ಎಂಎಲ್ಸಿ ಮಾಡಲು ಮಾದಿಗ ಸಮುದಾಯ ಆಗ್ರಹ

KannadaprabhaNewsNetwork | Published : Apr 7, 2025 12:34 AM

ಸಾರಾಂಶ

ಮಾದಿಗ ಸಮುದಾಯದ ಹಿರಿಯ ನಾಯಕ ಬಿ.ಎಚ್.ವೀರಭದ್ರಪ್ಪನವರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವಂತೆ ಕಾಂಗ್ರೆಸ್ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಿ ಮಾದಿಗ ಸಮುದಾಯ ಮುಖಂಡರು ನಗರದಲ್ಲಿ ಭಾನುವಾರ ಮೌನ ಮೆರವಣಿಗೆ ನಡೆಸಿದರು.

ಸಮುದಾಯ ಮುಖಂಡರ ಮೌನ ಮೆರವಣಿಗೆ । ನಿಸ್ವಾರ್ಥ ಸೇವೆ ಗುರುತಿಸಿ, ಸ್ಪಂದಿಸಲು ಹೈಕಮಾಂಡ್‌ಗೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಿಗ ಸಮುದಾಯದ ಹಿರಿಯ ನಾಯಕ ಬಿ.ಎಚ್.ವೀರಭದ್ರಪ್ಪನವರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವಂತೆ ಕಾಂಗ್ರೆಸ್ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಿ ಮಾದಿಗ ಸಮುದಾಯ ಮುಖಂಡರು ನಗರದಲ್ಲಿ ಭಾನುವಾರ ಮೌನ ಮೆರವಣಿಗೆ ನಡೆಸಿದರು.

ನಗರದ ಡಾ.ಬಿ.ಆರ್‌.ಆಂಬೇಡ್ಕರ್ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರ ನಿವಾಸದವರೆಗೆ ಸಮಾಜದ ಹಿರಿಯ ಮುಖಂಡರಾದ ಆಕಾಂಕ್ಷಿ ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಬಿ.ಪಿ.ಸುರೇಶ, ಡಿ.ಆರ್.ಮಂಜುನಾಥ, ಅನೇಕ ಮುಖಂಡರ ನೇತೃತ್ವದಲ್ಲಿ ಮೌನ ಮೆರವಣಿಗೆಯಲ್ಲಿ ಸಾಗಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಹೆಗ್ಗೆರೆ ರಂಗಪ್ಪ, 4 ದಶಕದಿಂದಲೂ ಕಾಂಗ್ರೆಸ್ಸಿನಲ್ಲಿ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದ, ಸರ್ವ ಜಾತಿ-ಧರ್ಮೀಯರ ಸೇವೆ ಮಾಡಿದ ನಮ್ಮ ಸಮುದಾಯದ ಹಿರಿಯ ನಾಯಕ ಬಿ.ಎಚ್.ವೀರಭದ್ರಪ್ಪನವರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವಂತೆ ಪಕ್ಷದ ವರಿಷ್ಟರಿಗೆ ಸಚಿವರು, ಶಾಸಕರು, ಸಂಸದರು ಒತ್ತಡ ಹೇರಬೇಕು ಎಂದರು.

ಸ್ವತಃ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ ಹೀಗೆ ಎಲ್ಲಾ ನಾಯಕರು ಬಿ.ಎಚ್.ವೀರಭದ್ರಪ್ಪ ಪರ ಒಲವು ತೋರಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ವೀರಭದ್ರಪ್ಪ ಪರ ಶಾಮನೂರು ಕುಟುಂಬವೂ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ವೀರಭದ್ರಪ್ಪ ಸೇವೆ ಗುರುತಿಸಿದವರು. ಈ ಸಲ ಎಂಎಲ್ಸಿ ಮಾಡುವ ಭರವಸೆಯನ್ನೂ ಖರ್ಗೆಯವರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮಾದಿಗ ಸಮುದಾಯದ ವೀರಭದ್ರಪ್ಪನವರಿಗೆ ಈ ಸಲ ಎಂಎಲ್ಸಿ ಆಗುವ ಅವಕಾಶ ತಪ್ಪಬಾರದು. ಜನತಾ ಪಕ್ಷದ ಸರ್ಕಾರವು 1978ರಲ್ಲಿ ಇಂದಿರಾ ಗಾಂಧಿಯವರನ್ನು ಬಂಧಿಸಿದ್ದಾಗ ದಾವಣಗೆರೆ ಬಂದ್ ಮಾಡಿ, ರೈಲು ತಡೆ ಮಾಡಿ, ಹೋರಾಟ ನಡೆಸಿದ್ದ ವೀರಭದ್ರಪ್ಪಗೆ ಅಂದಿನ ಸರ್ಕಾರ ಬಂಧಿಸಿ, 6 ತಿಂಗಳು ಜೈಲಲ್ಲಿಟ್ಟಿತ್ತು. ರೈಲ್ವೆ ಇಲಾಖೆ ಮಾತ್ರವಲ್ಲದೇ ದಾವಣಗೆರೆಯಲ್ಲಿ ಸುಮಾರು 30 ಕೇಸ್‌ ಸಹ 40 ಜನರ ಮೇಲೆ ಹೂಡಲಾಗಿತ್ತು. ಎಂತಹದ್ದೇ ಪರಿಸ್ಥಿತಿಯಲ್ಲಿ ವೀರಭದ್ರಪ್ಪ ಅವರು ಹೋರಾಟದಿಂದ ಹಿಂದೆ ಸರಿಯುವ ವ್ಯಕ್ತಿಯಲ್ಲ ಎಂದು ತಿಳಿಸಿದರು.

ಮಧ್ಯ ಕರ್ನಾಟಕದಿಂದ ಇದುವರೆಗೂ ಮಾದಿಗ ಸಮುದಾಯಕ್ಕೆ ಎಂಎಲ್ಸಿ ಮಾಡಿಲ್ಲ. ಈಗ ಅಂತಹದ್ದೊಂದು ಅವಕಾಶ ಕಾಂಗ್ರೆಸ್ ಪಕ್ಷದ ಮುಂದಿದ್ದು, ಸದಾ ಪಕ್ಷಕ್ಕೆ ನಿಷ್ಟವಾಗಿರುವ ಬಿ.ಎಚ್.ವೀರಭದ್ರಪ್ಪ ಹಾಗೂ ಸಮುದಾಯದ ಕೂಗಿಗೆ ಜಿಲ್ಲೆಯ ನಾಯಕರೂ ಸ್ಪಂದಿಸಿ, ರಾಷ್ಟ್ರೀಯ, ರಾಜ್ಯ ನಾಯಕರ ಮೇಲೆ ಒತ್ತಡ ಹೇರಬೇಕು ಎಂದು ಹೆಗ್ಗೆರೆ ರಂಗಪ್ಪ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ನಿಮ್ಮ ಮನವಿ ಸ್ವೀಕರಿಸಿದ್ದು, ವರಿಷ್ಟರ ಗಮನಕ್ಕೆ ತರುವ ಭರವಸೆ ನೀಡಿದರು.

ಮುಖಂಡರಾದ ಎನ್.ಶಂಕರ, ಗುರುಮೂರ್ತೆಪ್ಪ, ಹರಿಹರದ ವೈ.ರಘುಪತಿ, ಸಂತೋಷ, ಅರಸೀಕೆರೆ ಬ್ಲಾಕ್‌ನ ಪುಟಣಘಟ್ಟ ಹನುಮಂತಪ್ಪ, ಮಂಜುನಾಥ, ಮಾಯಕೊಂಡ ಕ್ಷೇತ್ರದ ಅಂಜಿನಪ್ಪ, ಪರಶುರಾಮಪ್ಪ, ಲೋಕಿಕೆರೆ ಮಂಜುನಾಥ, ಜಗಳೂರು ಮಹೇಶ್ವರಪ್ಪ, ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಮಂಜುನಾಥ, ಚನ್ನಗಿರಿ ನಾಗರಾಜಪ್ಪ, ಉಚ್ಚಂಗಿ ಪ್ರಸಾದ, ಗೋವಿಂದರಾಜ ಸಂತೇಬೆನ್ನೂರು, ಹೊನ್ನಾಳಿ ಕೊಡತಾಳ ರುದ್ರೇಶ, ಶಾಂತರಾಜ, ಹರಳಹಳ್ಳಿ ಬಿಜೋಗಟ್ಟೆ ಕುಮಾರ, ಹಳೇ ಚಿಕ್ಕನಹಳ್ಳಿ ಹನುಮಂತಪ್ಪ, ಬಿ.ನಿಂಗಪ್ಪ, ಶಕೀಲಾಭಾನು, ಅಣಜಿ ನಾಗೇಂದ್ರ, ಲೋಕಿಕೆರೆ ಮೇಘರಾಜ, ಮಹಾಂತೇಶ, ಸೋಮಶೇಖರ ವಿಜಯನಗರ ಬಡಾವಣೆ, ಕೆ.ಸಿ.ಗಿರೀಶ, ಐರಣಿ ಚಂದ್ರು, ಹಜರತ್ ಅಲಿ, ಶಂಕ್ರು, ಬೂದಾಳ್ ರಸ್ತೆ ಮಣಿ ಮೌನ ಮೆರವಣಿಗೆಯಲ್ಲಿದ್ದರು.

Share this article