ಚನ್ನಗಿರಿ: ಮಾದಿಗ ಸಮಾಜದ 35 ವರ್ಷಗಳ ನಿರಂತರ ಹೋರಾಟ ಫಲವಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತಂದಿದೆ. ಈ ಹೋರಾಟವನ್ನು ಬದ್ಧತೆಯಿಂದ ಮುನ್ನಡೆಸಿದ ಹೋರಾಟಗಾರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಾಲೂಕು ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಹೇಳಿದರು.
ಪಟ್ಟಣದ ರಾಮಮನೋಹರ ಲೋಹಿಯಾ ಭವನದಲ್ಲಿ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಚನ್ನಗಿರಿ ತಾಲೂಕು ಮಾದಿಗ ಸಮಾಜದ ಒಳಮೀಸಲಾತಿ ಹೋರಾಟಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಮುದಾಯಕ್ಕೆ ಒಳಮೀಸಲಾತಿಯನ್ನು ಕೊಡಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ, ಮುನಿಯಪ್ಪ, ಸತೀಶ್ ಜಾರಕೀಹೊಳಿ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ನಾಯಕರು ಒಗ್ಗಟ್ಟಾಗಿ ಹೋರಾಟ ಮಾಡಿದ್ದರು. ಇದರ ಪ್ರತಿಫಲವಾಗಿ ಇಂದು ರಾಜ್ಯ ಸರ್ಕಾರ ಒಳಮೀಸಲಾತಿ ಘೋಷಣೆ ಮಾಡಿದೆ. ಇದು ಷಡ್ಯೂಲ್ 9ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ಮಾಡಬೇಕಾಗಿದೆ ಎಂದರು.ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಗ್ಗೆರೆ ರಂಗಪ್ಪ ಮಾತನಾಡಿ, ಒಳಮೀಸಲಾತಿ ಜಾರಿಯಾಗುವ ನಿಟ್ಟಿನಲ್ಲಿ ನಮ್ಮಗಳ ಕಾರ್ಯ ಸಾಗಬೇಕಾಗಿದೆ. ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 6 ಪರ್ಸೆಂಟ್, ಉಳಿದ ಜಾತಿಗಳಿಗೆ 5 ಪರ್ಸೆಂಟ್ ಮೀಸಲಾತಿ ನೀಡಿದ್ದು, ಅಲೆಮಾರಿ ಸಮುದಾಯಗಳಿಗೆ 1 ಪರ್ಸೆಂಟ್ ಮೀಸಲಾತಿ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಒಳಮೀಸಲಾತಿ ರಾಜ್ಯದಲ್ಲಿ ಸಮರ್ಪಕ ಅನುಷ್ಠಾನಕ್ಕೆ ತರುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ದಲಿತ ಸಂಘಟನೆ ಪ್ರಮುಖರಾದ ನಲ್ಲೂರು ಶೇಖರಪ್ಪ, ಪಿ.ರುದ್ರಪ್ಪ, ಚಿಕ್ಕೂಲಿಕೆರೆ ಶಿವಲಿಂಗಪ್ಪ, ಕೋಗಲೂರು ಪ್ರಕಾಶ್, ಮಾಚನಾಯ್ಕನಹಳ್ಳಿ ಮಂಜುನಾಥ್, ಸಿ.ಬಸವರಾಜು ಸೇರಿದಂತೆ ಮೊದಲಾದವರು ಹಾಜರಿದ್ದರು.