ನಾಳೆ ಮಾದಿಗ ಮಹಾಸಭಾ ಪ್ರತಿಭಾ ಪುರಸ್ಕಾರ: ವೀರಭದ್ರಪ್ಪ

KannadaprabhaNewsNetwork |  
Published : May 24, 2026, 01:30 AM IST
23ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಗೌರವಾಧ್ಯಕ್ಷ ರವಿನಾರಾಯಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ 2025-26ನೇ ಸಾಲಿನ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತೀರ್ಣರಾದ ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭ ಮೇ 25ರಂದು ನಗರದ ಶ್ರೀ ಶಿವಯೋಗಿ ಮಂದಿರದ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಹಾಸಭಾ ಜಿಲ್ಲಾ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ 2025-26ನೇ ಸಾಲಿನ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತೀರ್ಣರಾದ ಮಾದಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭ ಮೇ 25ರಂದು ನಗರದ ಶ್ರೀ ಶಿವಯೋಗಿ ಮಂದಿರದ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಹಾಸಭಾ ಜಿಲ್ಲಾ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಾನಪದ ಕಲಾ ತಂಡಗಳೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಚ್.ಟಿ.ಶೇಖರ್ ಚಾಲನೆ ನೀಡುವರು. ಅಲ್ಲಿಂದ ಶ್ರೀ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದ ಸಮಾರಂಭ ಸ್ಥಳಕ್ಕೆ ಮರವಣಿಗೆ ತಲುಪಲಿದೆ ಎಂದರು.

ಅದೇ ದಿನ ಬೆಳಿಗ್ಗೆ 11ಕ್ಕೆ ಶ್ರೀ ಶಿವಯೋಗಿ ಮಂದಿರದ ನೂತನ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಶೈಕ್ಷಣಿಕ ಕಾರ್ಯಾಗಾರಕ್ಕೆ ಚಾಲನೆ ನೀಡುವರು. ಜಿಪಂ ಸಿಇ ಗಿತ್ತೆ ಮಾಧವ ವಿಠ್ಠಲರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ವರ ಬೇವಿನಮಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ರೇಣುಕಾ, ಪಾಲಿಕೆ ಆಯುಕ್ತ ಎನ್.ಮಹಾಂತೇಶ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ.ರಾಮಚಂದ್ರಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ದಕ್ಷಿಣದ ನೂತನ ಶಾಸಕ ಸಮರ್ಥ ಎಂ.ಶಾಮನೂರರನ್ನು ಸನ್ಮಾನಿಸಲಾಗುವುದು ಎಂದರು.

ಮಧ್ಯಾಹ್ನ 2.30ಕ್ಕೆ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀ, ಸಾಣೇಹಳ್ಳಿ ಶ್ರೀ, ವಿರಕ್ತ ಮಠದ ಶ್ರೀ, ಹಿರಿಯೂರು ಕೋಡಿಹಳ್ಳಿ ಮಠದ ಶ್ರೀ ಸಾನ್ನಿಧ್ಯ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸುವರು. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸುವರು. ಮಾಜಿ ಸಚಿವ ಎಚ್.ಆಂಜನೇಯ ಪ್ರಮಾಣಪತ್ರ, ಬ್ಯಾಗ್ ವಿತರಿಸುವರು. ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜ ವಿ.ಶಿವಗಂಗಾ, ಬಿ.ಪಿ.ಹರೀಶ, ಲತಾ ಮಲ್ಲಿಕಾರ್ಜುನ ತಮ್ಮ ತಮ್ಮ ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನಿಸುವರು ಎಂದು ಹೇಳಿದರು.

ಪಿಯುಸಿ ವಿಭಾಗದಲ್ಲಿ ಜಿಲ್ಲೆಯ 240 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ 931 ಸೇರಿದಂತೆ ಒಟ್ಟು 1172 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.

ಮಹಾಸಭಾ ಗೌರವಾಧ್ಯಕ್ಷ, ನಿವೃತ್ತ ಎಸ್ಪಿ ರವಿನಾರಾಯಣ, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಉಪಾಧ್ಯಕ್ಷರಾದ ಎಲ್.ಎಂ.ಹನುಮಂತಪ್ಪ, ಎಚ್.ಮಲ್ಲೇಶ, ಆದಾಪುರ ನಾಗರಾಜ, ವಕೀಲರಾದ ಹಲಗೇರಿ ಮಂಜಪ್ಪ, ದುರ್ಗೇಶ ಗುಡಿಗೇರಿ, ಸಹ ಕಾರ್ಯದರ್ಶಿಗಳಾದ ಸಿ.ಬಸವರಾಜ, ಜಿ.ರಾಕೇಶ ಗಾಂಧಿ ನಗರ, ಬಿ.ಆರ್.ಶಿವಮೂರ್ತಿ, ಎನ್.ಶಂಕರ, ಎ.ಮಂಜು, ದಿನೇಶ ಇತರರು ಇದ್ದರು.

ಮಾದಿಗ ಮಕ್ಕಳ ಶಿಕ್ಷಣ ಮಾರ್ಗದರ್ಶನಕ್ಕೆ ಡಾಟಾ ಬ್ಯಾಂಕ್‌

ದಾವಣಗೆರೆ ಜಿಲ್ಲೆಯಲ್ಲಿ ಮಾದಿಗ ಸಮುದಾಯದ 20 ಸಾವಿರ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, 211 ಮಕ್ಕಳಷ್ಟೇ ಉತ್ತೀರ್ಣರಾಗಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 20 ಸಾವಿರ ಮಕ್ಕಳು ಬರೆದಿದ್ದು, 1146 ಮಕ್ಕಳು ತೇರ್ಗಡೆಯಾಗಿದ್ದಾರೆ. ಪಿಯುಸಿನಲ್ಲಿ ಶೇ.1, ಎಸ್ಸೆಸ್ಸೆಲ್ಸಿಯಲ್ಲಿ ಶೇ.5 ಮಕ್ಕಳಷ್ಟೇ ಮಾದಿಗ ಸಮುದಾಯದಿಂದ ತೇರ್ಗಡೆಯಾಗಿರುವುದು ಆತಂಕದ ಸಂಗತಿ. ಮುಂದಿನ ದಿನಗಳಲ್ಲಿ ಮಾದಿಗ ಮಹಾಸಭಾದಿಂದ ಡಾಟಾ ಬ್ಯಾಂಕ್ ಮಾಡಿ, ಮಕ್ಕಳ ಫಲಿತಾಂಶ ಕಡಿಮೆ ಬರಲು ಕಾರಣವೇನೆಂಬುದನ್ನು ಪರಿಶೀಲಿಸಿ, ಮಾದಿಗ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ ನೀಡುವ ಕೆಲಸವನ್ನು ಮಾದಿಗ ಮಹಾಸಭಾ ಮಾಡಲಿದೆ ಎಂದು ನಿವೃತ್ತ ಪೊಲೀಸ್‌ ಅಧೀಕ್ಷಕ, ಮಾದಿಗ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ರವಿನಾರಾಯಣ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರುಮೌಲ್ಯಮಾಪನ: ಪಿಯುಸಿಯಲ್ಲಿ ಅನನ್ಯಗೆ ಹೆಚ್ಚುವರಿ 6 ಅಂಕ
ತುಂಗಾ ಮಹಾವಿದ್ಯಾಲಯದಲ್ಲೇ ಡಾ.ಯು.ಆರ್.ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಿ: ಕಲ್ಲೂರು ಮೇಘರಾಜ