ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಮಾದಿಗ ಸಮಾಜದ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರಲ್ಲಿ ಒಬ್ಬರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಮಾದಿಗ ಮಹಾಸಭಾದ ಮುಖಂಡರಾದ ಎಂ.ಸಿ. ವೀರಸ್ವಾಮಿ, ರಾಮಚಂದ್ರ ಒತ್ತಾಯಿಸಿದರು.
ಮಾದಿಗ ಸಮಾಜವನ್ನು ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ ವೋಟ್ ಬ್ಯಾಂಕ್ ಆಗಿ ಪರಿಗಣಿಸಿ ಕಡೆಗಣಿಸುತ್ತಿದೆ. ಈ ಸಮಾಜವನ್ನು ಚುನಾವಣೆ ಸಮಯದಲ್ಲಿ ಬಳಕೆ ಮಾಡಿಕೊಂಡು, ಹುಸಿ ಭರವಸೆ ನೀಡಿ ನಂತರ ಮರೆತು ಬಿಡುತ್ತಿದ್ದಾರೆ. ಮಾದಿಗ ಸಮಾಜ ಕೂಡ ಈಗ ಜಾಗೃತವಾಗುತ್ತಿದೆ. ಇದನ್ನು ರಾಜಕೀಯ ಪಕ್ಷಗಳು ಮರೆಯಬಾರದು. ಸಮಾಜಕ್ಕೆ ಧ್ವನಿ ನೀಡಲು ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
ಮುಖಂಡ ಮಾರೆಣ್ಣ ಮಾತನಾಡಿ, ಮಾದಿಗ ಸಮಾಜದವರಿಗೂ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಮಾದಿಗ ಸಮಾಜದವರು ಚುನಾವಣೆಗೆ ಸ್ಪರ್ಧಿಸಿದಾಗ ಕಡೆಗಣಿಸಲಾಗುತ್ತಿದೆ. ಈ ರೀತಿ ಆಗಬಾರದು. ಮೀಸಲು ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಿದಾಗ ಗೆಲ್ಲಿಸಬೇಕು. ಮಾದಿಗರನ್ನು ಸಮಾಜದಲ್ಲಿ ನೋಡುವ ದೃಷ್ಟಿಕೋನ ಬದಲಾಗಬೇಕು. ಇಡೀ ದೇಶದ ಸ್ವಚ್ಛತೆಯಲ್ಲಿ ಮಾದಿಗ ಸಮಾಜದ ಕೊಡುಗೆ ಅಪಾರವಾಗಿದೆ. ಪೌರ ಕಾರ್ಮಿಕರನ್ನು ಕಡೆಗಣಿಸಬಾರದು. ಅವರ ಸಮಸ್ಯೆಗಳಿಗೂ ಪರಿಹಾರ ದೊರೆಯಬೇಕು ಎಂದರು.ಮುಖಂಡರಾದ ಮಾರೆಣ್ಣ, ಸೆಲ್ವಂ, ಭರತ್ ಕುಮಾರ್ ಸಿ. ಆರ್., ಎಚ್. ಶ್ರೀನಿವಾಸ್, ಶೇಷು, ಬಸವರಾಜ, ಕರಿಯಪ್ಪ, ಪಂಪಾಪತಿ, ಹನುಂಮತಪ್ಪ, ಜಗನ್ನಾಥ, ರಘು ಜೆ.ಬಿ., ರಾಜು, ಮಾರೇಶ, ವಿಜಯ್ ಕುಮಾರ್ ಮತ್ತಿತರರಿದ್ದರು.