ಸಮಾಜದ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ ಯಾವ ಪಕ್ಷ ಬೆಂಬಲಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವ ಕಾರ್ಯ ಮುಂಬರುವ ದಿನಗಳಲ್ಲಿ ಮಾಡುತ್ತೇವೆ
ಲಕ್ಷ್ಮೇಶ್ವರ: ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಗದಗ ಜಿಲ್ಲೆಯ ಮಾದಿಗ ಸಮಾಜದ ಬಾಂಧವರ ವಿರೋಧವಿದೆ ಎಂದು ಲಕ್ಷ್ಮೇಶ್ವರ ತಾಲೂಕಿನ ಮಾದಿಗ ಸಮಾಜದ ಮುಖಂಡ ಸುರೇಶ ನಂದೆಣ್ಣವರ ಹೇಳಿದ್ದಾರೆ.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಾದಿಗ ಸಮಾಜದ ಅಭ್ಯರ್ಥಿ ಸುಜಾತಾ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿತ್ತು. ಆಗ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಚುನಾವಣಾ ಕಣದಲ್ಲಿ ನಿಲ್ಲುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ನೇರವಾಗಿ ಕಾರಣವಾಗಿದ್ದಾರೆ. ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಮಾದಿಗ ಸಮಾಜದ ವಿರೋಧವಿದೆ. ರಾಮಕೃಷ್ಣ ದೊಡ್ಡಮನಿ ಪಕ್ಷೇತರರಾಗಿ ಸ್ಪರ್ಧೆ ಮಾಡದೆ ಇದ್ದರೆ ಕಾಂಗ್ರೆಸ್ ಪಕ್ಷದ ಸುಜಾತಾ ದೊಡ್ಡಮನಿ ಗೆಲುವು ನಿಶ್ಚಿತವಾಗಿತ್ತು. ಇದರಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಆಗ ಕಾಂಗ್ರೆಸ್ ಪಕ್ಷವು 6 ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು. ಈಗ ಕಾಂಗ್ರೆಸ್ ಪಕ್ಷಕ್ಕೆ ಅನ್ಯಾಯ ಮಾಡಿದ ವ್ಯಕ್ತಿಯನ್ನು ಮತ್ತೆ ಕರೆತರುವಲ್ಲಿ ಯಾವ ಲಾಭವು ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರು ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವ ಕಾರ್ಯ ಮಾಡಬಾರದು. ಒಂದು ವೇಳೆ ಇಂತಹ ವ್ಯಕ್ತಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮಾದಿಗ ಸಮಾಜಕ್ಕೆ ರಾಮಕೃಷ್ಣ ದೊಡ್ಡಮನಿ ಅವರು ಮಾಡಿದ ಅನ್ಯಾಯದ ಕುರಿತು ತಿಳಿವಳಿಕೆ ಮೂಡಿಸುವ ಕಾರ್ಯ ಮಾಡುತ್ತೇವೆ. ಅಲ್ಲದೆ ಸಮಾಜದ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ ಯಾವ ಪಕ್ಷ ಬೆಂಬಲಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವ ಕಾರ್ಯ ಮುಂಬರುವ ದಿನಗಳಲ್ಲಿ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮನೋಹರ ಕರ್ಜಗಿ, ನಾಗೇಶ್ ಅಮರಾಪೂರ ಮಾತನಾಡಿ, ರಾಮಕೃಷ್ಣ ದೊಡ್ಡಮನಿ ನಮ್ಮ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. 2014 ರಲ್ಲಿ ಕಾಂಗ್ರೆಸ್ ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿತ್ತು. ಆಗ ತಾಲೂಕಿನ ಎಲ್ಲ ಮಾದಿಗ ಸಮಾಜ ಬಾಂಧವರು ಒಗ್ಗೂಡಿ ಅವರು ಗೆಲುವಿಗೆ ಕಾರಣರಾಗಿದ್ದನ್ನು ಮರೆತು ಸುಜಾತಾ ದೊಡ್ಡಮನಿ ಅವರ ಸೋಲಿಗೆ ನೇರವಾಗಿ ಕಾರಣವಾಗಿದ್ದಾರೆ, ಹೀಗಾಗಿ ಮಾದಿಗ ಸಮಾಜವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಈ ವೇಳೆ ಸಂತೋಷ ನಂದೆಣ್ಣವರ, ಆನಂದ ತಳಗೇರಿ, ಮಲ್ಲೇಶಿ ಬಸವಾ ನಾಯ್ಕರ, ದೇವರಾಜ ನಡವಲಕೇರಿ, ಮಹಾಂತೇಶ ಗುಡಿಸಲಮನಿ, ಗಾಳೆಪ್ಪ ಹರಿಜನ, ಜಗದೀಶ ದೊಡ್ಡಮನಿ, ಜಗದೀಶ ಹುಲಿಗೆಮ್ಮನವರ, ರಾಘವೇಂದ್ರ ನಂದೆಣ್ಣವರ ಸೇರಿದಂತೆ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.