ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಜನರು ಸಹಕಾರ ನೀಡುವಂತಾಗಬೇಕು ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಡಾ.ಜೋಶ ತೋಮಸ್ ಅವರು ಕಾರ್ಯಕ್ರಮದ ಬಗ್ಗೆ ಮಾತನಾಡಿ ಕ್ಷಯ ರೋಗ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿ ಕೊಡಗು ಜಿಲ್ಲೆಗೆ ಕಂಚಿನ ಪದಕ ಲಭಿಸುವಂತೆ ಕಾರ್ಯನಿರ್ವಹಿಸಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕಚೇರಿ ಇದೀಗ 2025ರ ವೇಳೆಗೆ ಕ್ಷಯ ಮುಕ್ತ ಜಿಲ್ಲೆಯಾಗಿರುವ ಉದ್ದೇಶ ಹೊಂದಿದೆ ಎಂದರು.ಕೊಡಗು ಜಿಲ್ಲೆ 2015ಕ್ಕೆ ಹೋಲಿಸಿದರೆ 2023 ಕ್ಷಯ ರೋಗದ ಪ್ರಕರಣಗಳಲ್ಲಿ ಶೇ.20ರಷ್ಟು ಕಡಿಮೆ. ಆದ್ದರಿಂದ ಕ್ಷಯ ರೋಗ ನಿರ್ಮೂಲನೆಗೆ ಕೈಗೊಂಡ ಕ್ರಮಗಳನ್ನು ಮೆಚ್ಚಿ ಕೊಡಗು ಜಿಲ್ಲೆಗೆ ರಾಷ್ಟ್ರಮಟ್ಟದ ವಾರಾಣಾಸಿಯಲ್ಲಿ ಕಂಚಿನ ಪದಕ ನೀಡಿ ಗೌರವಿಸಲಾಗಿದೆ. ಈಗ ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮಾತ್ರವಲ್ಲದೆ ಜನರಲ್ಲಿ ಅರಿವು ಮೂಡಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳು ಹೆಚ್ಚಾಗಿ ವರದಿಯಾದ ಸ್ಥಳಗಳಲ್ಲಿ ಜನಪದ ಬೀದಿ ನಾಟಕ ಕಲಾತಂಡಗಳ ಪ್ರದರ್ಶನ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಲ್ಲಿ ಗೋಡೆ ಬರಹ ಮತ್ತು ಸಾರ್ವಜನಿಕ ಸ್ಥಳಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ರೇಡಿಯೋ ಜಿಂಗಲ್ಸ್ ಮುಖಾಂತರ ಜಾಗೃತಿ ಮೂಡಿಸಲಾಯಿತು ಎಂದರು.
ಕ್ಷಯ ರೋಗದ ತ್ವರಿತ ಪತ್ತೆಗಾಗಿ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಿಬಿ ನೆಟ್ ಹಾಗೂ ಟ್ರು ನೆಟ್ ಯಂತ್ರಗಳಿಂದ ಟಿಬಿ ಪರೀಕ್ಷೆ ಮಾಡಲಾಗುತ್ತದೆ. ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಸಂಪೂರ್ಣವಾಗಿ ರೋಗವನ್ನು ಗುಣಪಡಿಸಬಹುದು ಎಂದು ತಿಳಿಸಿದರು.