ಬೆಂಗಳೂರಿನ ಎಚ್ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ನಾಗರಿಕ ಪ್ರಯಾಣಕ್ಕೆ ಬಳಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಬೃಹತ್‌ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಪರಿಷತ್

ಬೆಂಗಳೂರಿನ ಎಚ್ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ನಾಗರಿಕ ಪ್ರಯಾಣಕ್ಕೆ ಬಳಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಬೃಹತ್‌ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಎಂ.ಗೋವಿಂದರಾಜು ಅವರು ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ನಾಗರಿಕ ಪ್ರಯಾಣಕ್ಕೆ ಬಳಸುವ ಪ್ರಸ್ತಾವನೆ ಪರಿಶೀಲನೆಯ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಸದಸ್ಯರ ಮತ್ತೊಂದು ಪ್ರಶ್ನೆಗೆ, ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಅಭಿವೃದ್ಧಿಗೆ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಈ ಮೂರೂ ಸ್ಥಳಗಳನ್ನು ಪ್ರಾಧಿಕಾರದ ತಾಂತ್ರಿಕ ತಂಡ ಕಳೆದ ಏಪ್ರಿಲ್‌ನಲ್ಲೇ ಪರಿವೀಕ್ಷಣೆ ಕೈಗೊಂಡು, ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯಿಂದ ‘ಪೂರ್ವ ಕಾರ್ಯಸಾಧ್ಯತಾ ವರದಿ’ ಪಡೆದಿರುತ್ತದೆ. ಆದರೆ, ಸರ್ಕಾರ ಗುರುತಿಸಿರುವ ಜಾಗಗಳ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಡಿರುವ ಶಿಫಾರಸುಗಳ ಹಿನ್ನೆಲೆಯಲ್ಲಿ ‘ಪ್ರಸ್ತುತ ಕಾರ್ಯಸಾಧ್ಯತಾ ವರದಿ’ ತಯಾರಿಸಲು ಸಮಾಲೋಚಕರ ಆಯ್ಕೆಗೆ ಟೆಂಡರ್‌ ಕರೆಯಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಸ್ತುತ ಗುರುತಿಸಿರುವ ಜಾಗಗಳಲ್ಲಿ ಏರಿಳಿತದಿಂದ ಕೂಡಿರುವ ಗುಡ್ಡಗಳು ಇರುವುದರಿಂದ ನಿರ್ಮಾಣ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಪ್ರಸ್ತಾಪಿತ ಜಾಗದ ಸಮೀಪ ಎಚ್‌ಎಎಲ್‌, ಬಿಐಎಎಲ್‌ ಹಾಗೂ ಇತರೆ ವಿಮಾನ ನಿಲ್ದಾಣಗಳು ಇರುವುದರಿಂದ ನಿರ್ಬಂಧಿತ ವಾಯುಪ್ರದೇಶವಾಗಿದ್ದು, ಉಪಕರಣ ಮಾರಾಟ ಕಾರ್ಯವಿಧಾನ ಮೂಲಕ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ವಾಯುಪ್ರದೇಶವನ್ನು ನಿರ್ಧರಿಸಬೇಕಾಗಿರುತ್ತದೆ ಎಂದು ಹೇಳಿದೆ. ಅಲ್ಲದೆ, ಸುತ್ತಮುತ್ತಲ ಪ್ರದೇಶವು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವಿರುವುದರಿಂದ ಶಬ್ದಮಾಲಿನ್ಯದ ಅಧ್ಯಯನಕ್ಕೆ ಒಎಲ್‌ಎಸ್‌ ಸರ್ವೆ ಹಾಗೂ ಐಎಫ್‌ಪಿ ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ವರದಿಯಲ್ಲಿನ ಅಂಶಗಳನ್ನು ಅಧ್ಯಯನ ಮಾಡಿ ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಕ್ತ ಸಮಾಲೋಚಕರ ಆಯ್ಕೆಗೆ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.