ಮ್ಯಾರಥಾನ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಚಾಲನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯುವ ಜನತೆಯು ಮಾದಕ ವ್ಯಸನವೆಂಬ ಮಾರಕ ಜಾಲಕ್ಕೆ ಸಿಲುಕದೆ, ಸದೃಢ ಮತ್ತು ಆರೋಗ್ಯವಂತ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಕರೆ ನೀಡಿದರು.

ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಭಾನುವಾರ ಜಿಲ್ಲಾ ಪೋಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತ ರನ್ 2.0 ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಇಂದಿನ ವೇಗದ ಬದುಕಿನಲ್ಲಿ ದೈಹಿಕ ವ್ಯಾಯಾಮ, ಓಟ, ನಡಿಗೆ ಮತ್ತು ಯೋಗದಂತಹ ಚಟುವಟಿಕೆಗಳು ಅತ್ಯಗತ್ಯ. ಯುವಜನತೆ ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ಸಬಲರಾಗಬೇಕು. ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಹೊಂದುವಂತೆ ಕಿವಿಮಾತು ಹೇಳಿದರು.

ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಮೊದಲನೇ ಸ್ಥಾನವನ್ನು ಡಿ.ಬೋರಪ್ಪ ಕಾಲೇಜಿನ ವಿದ್ಯಾರ್ಥಿ ಸಚಿನ್ ಪಡೆದರು. ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿ ಜೋಶ್ಯಾ ದ್ವಿತೀಯ ಸ್ಥಾನ ಹಾಗೂ ವಿದ್ಯಾವಿಕಾಸ ಶಾಲೆಯ ಸಮೃದ್ ತೃತೀಯ ಸ್ಥಾನ ಪಡೆದರು.

ಮಹಿಳಾ ವಿಭಾಗದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ಐಸಿರಿ ಪ್ರಥಮ ಸ್ಥಾನ, ಡಾನ್ ಬಾಸ್ಕೋ ಕಾಲೇಜಿನ ವಿದ್ಯಾರ್ಥಿನಿ ಎಸ್.ಪ್ರತೀಕ್ಷಾ ದ್ವಿತೀಯ ಹಾಗೂ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿನಿ ಶಿರಿಷಾ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.


ಚಿತ್ರದುರ್ಗ ನಗರದ ಡಿಎಆರ್ ಮೈದಾನದಿಂದ ಪ್ರಾರಂಭವಾದ ಮ್ಯಾರಥಾನ್ ವಾಸವಿ ಲ್ಯಾಬ್ ಮುಂಭಾಗದಿಂದ ಬಿ.ಡಿ.ರಸ್ತೆಯ ಮೂಲಕ ಚಳ್ಳಕೆರೆ ಸರ್ಕಲ್, ಮದಕರಿ ಸರ್ಕಲ್, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಹೆಡ್ ಪೋಸ್ಟ್ ಆಫೀಸ್ ಹತ್ತಿರ ಗಾಂಧಿವೃತ್ತ, ಪ್ರವಾಸಿ ಮಂದಿರದ ಹತ್ತಿರ ಎಡಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಮೂಲಕ ಪುನಃ ಡಿಎಆರ್ ಮೈದಾನದಲ್ಲಿ ಅಂತ್ಯಗೊಂಡಿತು.

ಐಮಂಗಲ ಪೊಲೀಸ್ ತರಬೇತಿಯ ಶಾಲೆಯ ಪ್ರಾಂಶುಪಾಲರು ಸುಮಾರು 700ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.