31ರೊಳಗೆ ವಿಮಾನ ನಿಲ್ದಾಣಗಳಿಗೆ ಕನ್ನಡ ಮಹನಿಯರ ನಾಮಕರಣಕ್ಕೆ ಒತ್ತಾಯ

| Published : Nov 17 2025, 01:15 AM IST

ಸಾರಾಂಶ

ನ. 31ರೊಳಗಾಗಿ ಕನ್ನಡದ ಮಹನೀಯರ ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಕುಂದಗೋಳ: ರಾಜ್ಯದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಿಗೆ ನ. 31ರೊಳಗಾಗಿ ಕನ್ನಡದ ಮಹನೀಯರ ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿಭಟನೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿಯವರ ಸಮಾಧಿ ಪಕ್ಕದ ಜಮೀನಿನಲ್ಲಿ ನಡೆದ ಈ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಮನಸೂರುಮಠದ ಬಸವರಾಜ ದೇವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಹುಬ್ಬಳ್ಳಿಗೆ ಸಂಗೊಳ್ಳಿ ರಾಯಣ್ಣ, ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಮೊಗ್ಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ನೂರಾರು ಕನ್ನಡಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಳಗೊಂಡಂತೆ ಹಾಗೂ ಕೇಂದ್ರ ಸರ್ಕಾರ ನ. 31ರ ಒಳಗಾಗಿ ಈ ಮಹನಿಯರ ಹೆಸರು ನಾಮಕರಣ ಮಾಡದೆ ಇದ್ದಲ್ಲಿ ಡಿ. 27ಕ್ಕೆ ಬೃಹತ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೇಂದ್ರ ಸಚಿವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನವಿದ್ದು, ಅವರು ಮಾಡೇ ಮಾಡುತ್ತಾರೆ ಎಂಬ ನಂಬಿಕೆಯಿದೆ. ಆದರೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರತಿಭಟನೆ ಕುರಿತು ಚರ್ಚಿಸಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖಂಡ ಅಡಿವೆಪ್ಪ ಶಿವಳ್ಳಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಅವರು ಹೋರಾಟದ ರೂಪರೇಷೆ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಹೋರಾಟದ ಕುರಿತ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಮುಖಂಡರಾದ ಚಂದ್ರಶೇಖರ ಜುಟ್ಟಲ್, ವಿಶಾಲ ಅಬ್ಬಯ್ಯ, ಶಿವಾನಂದ ಪೂಜಾರ, ಅಬ್ದುಲ್ ಮುನಾಫ ಐನಾಪೂರ, ಕಲ್ಲಪ್ಪ ಹರಕುಣಿ, ಚಂದ್ರು ಕುರುಬರ, ಶ್ರೀನಿವಾಸ ಬೆಳದಡಿ, ರವಿ ತಡಹಾಳ, ಮುಂಜುನಾಥ ತಡಹಾಳ, ಯಲ್ಲಪ್ಪ ಹಾರೋಗೇರಿ, ಜಗದೀಶ ಸೊಟ್ಟಮ್ಮನವರ, ಯಲ್ಲಪ್ಪ ಕುಂದಗೋಳ, ಫಕ್ಕಿರೇಶ ನಾಯ್ಕರ ಸೇರಿದಂತೆ ಹಲವರಿದ್ದರು.