ಸಾರಾಂಶ
ಬಳ್ಳಾರಿ: ಸ್ವಾರ್ಥವಿಲ್ಲದೇ ಸೇವೆಗೈಯುವವರು ಅತ್ಯಂತ ವಿರಳವಾಗುತ್ತಿರುವವರ ನಡುವೆ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಕಳೆದ ಒಂದು ದಶಕದಿಂದ ಜನಸೇವೆಯಲ್ಲಿ ತೊಡಗಿಸಿಕೊಂಡು ಕಾಳಜಿಯ ಕೈಂಕರ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಸಂಡೂರು ವಿರಕ್ತಮಠದ ಪ್ರಭುಸ್ವಾಮೀಜಿ ಸ್ಮರಿಸಿದರು.
ನಗರದ ಸಂಗನಕಲ್ಲು ರಸ್ತೆಯಲ್ಲಿ ಸನ್ಮಾರ್ಗ ಗೆಳೆಯರ ಬಳಗದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಭಾನುವಾರ ಅವರು ಮಾತನಾಡಿದರು.ಜನರಲ್ಲಿ ಸಂವೇದನೆ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಯಾವುದೇ ಘಟನೆ ನಡೆದರೂ ಪ್ರತಿಕ್ರಿಯಿಸುವವರು ವಿರಳವಾಗುತ್ತಿದ್ದಾರೆ. ದುರಂತವೊಂದು ನಡೆದಾಗ ಅಲ್ಲಿ ಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುವ ಬದಲು ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವವರೇ ಹೆಚ್ಚಾಗುತ್ತಿದ್ದಾರೆ. ಈ ಎಲ್ಲ ಬೆಳವಣಗೆ ಗಮನಿಸಿದರೆ ಸಮಾಜ ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಿದೆ ಎಂದು ಖೇದವಾಗುತ್ತದೆ. ಮನುಷ್ಯನಲ್ಲಿ ಸಂವೇದನೆಗಳು ದುರ್ಬಲವಾಗುತ್ತಿದ್ದಂತೆಯೇ ಈ ರೀತಿಯ ವರ್ತನೆಗಳು ಹೆಚ್ಚಾಗುತ್ತಾ ಹೋಗುತ್ತಿದ್ದು ಪುಸ್ತಕ ಸಂಸ್ಕೃತಿಯಿಂದ ದೂರ ಉಳಿದಿರುವುದೇ ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ.
ನನಗಿಂತ ಸಮಾಜ ದೊಡ್ಡದು. ಸಮಾಜಕ್ಕಿಂತ ದೇಶ ದೊಡ್ಡದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಸನ್ಮಾರ್ಗ ಗೆಳೆಯರ ಬಳಗದಂತಹ ಸಂಸ್ಥೆಗಳು ಹೆಚ್ಚು ಹೆಚ್ಚು ಅಸ್ವಿತ್ವ ಪಡೆದು ಜನಮುಖಿಯಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಆಶಿಸಿದರಲ್ಲದೆ, ಸಮಾಜಮುಖಿಯಾದವರು ಮಾತ್ರ ಸದಾ ಸ್ಮರಣೀಯರಾಗುತ್ತಾರೆ ಎಂದು ಶ್ರೀಗಳು ತಿಳಿಸಿದರು.ಧರ್ಮಕ್ಕಿಂತ ಮಾನವೀಯತೆ ದೊಡ್ಡದು:
ಧರ್ಮ-ಜಾತಿ ಚರ್ಚೆಯಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ಧರ್ಮಕ್ಕಿಂತ ಮನುಷ್ಯ-ಮಾನವೀಯತೆ ದೊಡ್ಡದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಗುಡಿಯಲ್ಲಿ ಗಂಟೆ ಬಾರಿಸುವುದು, ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುವುದು, ಮಸೀದಿಯಲ್ಲಿ ನಮಾಜ್ ಮಾಡುವುದು ಧರ್ಮವಲ್ಲ. ಮಾನವೀಯತೆ, ಪ್ರೀತಿ, ಸಹೋದರತ್ವ, ಅಃತಕರಣವೇ ನಿಜವಾದ ಧರ್ಮ.ಯಾವ ವ್ಯಕ್ತಿ ಸಮಾಜಕ್ಕೆ ತೊಡಗಿಸಿಕೊಳ್ಳುತ್ತಾನೆಯೋ, ಆತ ಸತ್ತ ಬಳಿಕವೂ ಜೀವಂತವಾಗಿ ಉಳಿಯುತ್ತಾನೆ.
ಧರ್ಮ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಾತಿ-ಧರ್ಮದಲ್ಲಿ ಬರೀ ಕಾಲಹರಣ ಮಾಡುವ ಬದಲು ಉತ್ತಮ ಸಮಾಜ ನಿರ್ಮಾಣದ ಕಡೆ ಮನಸ್ಸು ಹಾಯಿಸಬೇಕು. ಸಮಾಜದ ಒಳಿತಾಗಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ಸನ್ಮಾರ್ಗದಂತಹ ಸಂಸ್ಥೆಗಳು ಆರೋಗ್ಯ, ಪರಿಸರ, ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪರಿಸರ ಉಳಿಸಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ಪರಿಸರ ನಾಶವಾದರೆ ಯಾರೂ ಬದುಕುಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕೈಗಾರಿಕೋದ್ಯಮ ಭರಾಟೆಯಿಂದಾಗಿ ಕಲುಷಿತ ವಾತಾವರಣ ಮತ್ತಷ್ಟೂ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯದಿಂದ ರಕ್ಷಣೆ ಮಾಡಿಕೊಳ್ಳಲು ಮರ-ಗಿಡಗಳನ್ನು ಬೆಳೆಸುವ ಕಾಳಜಿಯನ್ನು ಎಲ್ಲ ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂದು ಹೇಳಿದರು.ಸಾಹಿತ್ಯ ಸಮ್ಮೇಳನದ ಮೇಲೆ ಅನಿಶ್ಚಿತತೆಯ ಕಾರ್ಮೋಡ...............
ಭಾಷೆ ಬೆಳೆಯೂ ಹೌದು. ಬೇಲಿಯೂ ಹೌದು. ಭಾಷಾ ವಿಷಯದಲ್ಲಿ ಬಳ್ಳಾರಿ ಮಾದರಿ ಜಿಲ್ಲೆ ಎಂಬ ಹೆಗ್ಗಳಿಕೆಯಿದೆ. ಬಳ್ಳಾರಿ ಕರ್ನಾಟಕದ ಸ್ಫೂರ್ತಿ ಭೂಮಿ. ಕರ್ನಾಟಕ ಏಕೀರಣಕ್ಕೆ ಬಳ್ಳಾರಿ ಕೊಡುಗೆ ಬಹುದೊಡ್ಡದು. ಮೈಸೂರು ಪ್ರಾಂತ್ಯಕ್ಕೆ ಸೇರಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೂ ಬಳ್ಳಾರಿ ಪಾತ್ರವಾಗಿದೆ. ಕರ್ನಾಟಕ ಏಕೀಕರಣದಲ್ಲಿ ಹುತಾತ್ಮರಾದ ನಾಡಿನ ಏಕೈಕ ಹೋರಾಟಗಾರ ಪಿಂಜಾರ ರಂಜಾನ್ ಸಾಬ್ ಅವರು ಬಳ್ಳಾರಿಯವರು ಎಂಬುದು ಮತ್ತೊಂದು ಹೆಮ್ಮೆ ಪಡುವ ಸಂಗತಿ. ಭಾಷೆ ವಿಚಾರದಲ್ಲಿ ಗಡಿಜಿಲ್ಲೆ ಬಳ್ಳಾರಿಯಲ್ಲಿ ಎಂದೂ ಜಗಳಗಾಗಿಲ್ಲ ಎಂದು ವಿಶ್ಲೇಷಿಸಿದರು. ವಿಪರ್ಯಾಸ ಸಂಗತಿ ಎಂದರೆ 68 ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಬಳ್ಳಾರಿಗೆ ಬಂದಿದ್ದರೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಡೆಯಿಂದಾಗಿ ಪರಿಷತ್ತಿಗೆ ರಾಜ್ಯ ಸರ್ಕಾರ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸಿದೆ. ಇದರಿಂದ ಸಮ್ಮೇಳನದ ಮೇಲೆ ಅನಿಶ್ಚಿತೆತೆಯ ಕಾರ್ಮೋಡ ಕವಿದಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಬಳ್ಳಾರಿಗರೇ ಒಗ್ಗೂಡಿ ಸಮ್ಮೇಳನ ನಡೆಸುವಂತಾಗಬೇಕು ಎಂದು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಅವರು ಸನ್ಮಾರ್ಗ ಸಂಸ್ಥೆ ನಡೆದು ಬಂದ ಹಾದಿ ಹಾಗೂ ನೂತನ ಕಟ್ಟಡಕ್ಕೆ ನೆರವಾದ ಬಳಗದ ಸದಸ್ಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ಮೂರ್ತಿ, ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ, ಗೌರವಾಧ್ಯಕ್ಷ ಕೆ.ಪಂಪಾಪತಿ ಹಾಗೂ ಸಹಾಯಕ ಆಯುಕ್ತ ಪ್ರಮೋದ್ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸನ್ಮಾರ್ಗದ ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವಾಗಬೇಕು. ಕಟ್ಟಡ ನಿರ್ಮಾಣದ ಉದ್ದೇಶ ಸಫಲವಾಗಲು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವಂತಾಗಬೇಕು ಎಂದು ಮುಖ್ಯ ಅತಿಥಿಗಳು ತಿಳಿಸಿದರು.
ಉಪಾಧ್ಯಕ್ಷರಾದ ಸಲ್ಲಾ ಹನುಮಂತರೆಡ್ಡಿ, ಎಂ.ಎಸ್.ಜಿ.ಜಗದೀಶ್, ತೋರಣಗಲ್ ಡಿವೈಎಸ್ಪಿ ಪ್ರಸಾದ ಗೋಖಲೆ ಮತ್ತಿತರರು ಉಪಸ್ಥಿತರಿದ್ದರು. ಸನ್ಮಾರ್ಗದ ಸದಸ್ಯರಾದ ಸತ್ಯನಾರಾಯಣ ಹಾಗೂ ಎರಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಕುಮಾರ ಕನ್ನಡ ಗೀತೆಗಳನ್ನು ಹಾಡಿದರು.;Resize=(128,128))
;Resize=(128,128))