ಹಾನಗಲ್ಲಿನಲ್ಲಿ ಆರ್‌ಎಸ್‌ಎಸ್‌ನಿಂದ ಆಕರ್ಷಕ ಪಥಸಂಚಲನ

| Published : Nov 17 2025, 01:15 AM IST

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರದಷ್ಟು ಸ್ವಯಂ ಸೇವಕರ ಪಥ ಸಂಚಲನ ಮೂರು ನೂರಕ್ಕೂ ಅಧಿಕ ಪೊಲೀಸ್ ರಕ್ಷಣೆಯಲ್ಲಿ ಶಾಂತವಾಗಿ ನಡೆದಿದೆ.

ಹಾನಗಲ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾವಿರದಷ್ಟು ಸ್ವಯಂ ಸೇವಕರ ಪಥ ಸಂಚಲನ ಮೂರು ನೂರಕ್ಕೂ ಅಧಿಕ ಪೊಲೀಸ್ ರಕ್ಷಣೆಯಲ್ಲಿ ಶಾಂತವಾಗಿ ನಡೆದಿದೆ.

ಹಾನಗಲ್ಲ ಪಟ್ಟಣದ ಪಥಸಂಚಲನ ಸಾಗುವ ಬೀದಿಗಳಲ್ಲಿ ಮಹಾತ್ಮರ ಭಾವಚಿತ್ರಗಳು ರಾರಾಜಿಸಿದವು. ಪಥ ಸಂಚಲನದುದ್ದಕ್ಕೂ ಹೂವಿನ ಹಾಸಿಗೆ ಹಾಗೂ ಪಥ ಸಂಚಲನದಲ್ಲಿದ್ದ ಸ್ವಯಂ ಸೇವಕರ ಮೇಲೆ ಹೂವು ಹಾಕುತ್ತಿದ್ದ ಮಹಿಳೆಯರು, ಮಕ್ಕಳು ಭಾರತ ಮಾತಾಕಿ ಜೈ ಎಂಬ ಘೋಷಣೆ ಕೂಗಿದರು.ಬೆಳಗಿನಿಂದಲೇ ಪಟ್ಟಣದಲ್ಲಿ ಗಣವೇಷಧಾರಿ ಸ್ವಯಂ ಸೇವಕರ ಓಡಾಟ ಗಮನ ಸೆಳೆಯಿತು. ಭಾನುವಾರವೂ ಕೆಲವರು ಗಣವೇಷದ ಉಡುಪು ಖರೀದಿಸಿದರು. ಸಂಜೆ ೩.೪೦ಕ್ಕೆ ಸರಿಯಾಗಿ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಆರಂಭವಾದ ಪಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ೫ ಗಂಟೆಯ ಹೊತ್ತಿಗೆ ಪಥ ಸಂಚಲನ ಮತ್ತೆ ಶ್ರೀ ಕುಮಾರೇಶ್ವರ ವಿರಕ್ತಮಠಕ್ಕೆ ಬಂದು ಸೇರಿತು. ಯಾವುದೇ ವೇದಿಕೆ ಭಾಷಣ ಕಾರ್ಯಕ್ರಮಗಳು ಇರಲಿಲ್ಲ. ಪಥ ಸಂಚಲನದ ಮುಂದೆ ಹಾಗೂ ಹಿಂದೆ ಪೊಲೀಸ್‌ ಕಾವಲು ವಿಶೇಷವಾಗಿತ್ತು. ಅಲ್ಲಲ್ಲಿ ಪೊಲೀಸ್‌ ಬಂದೋಬಸ್ತ್‌ ಹಾಗೂ ಸಂಚಾರಕ್ಕೆ ಅಡಚಣೆ ಆಗದಂತೆ ನಿರ್ವಹಣೆ ಇದ್ದುದರಿಂದ ಎಲ್ಲಿಯೂ ವಾಹನ ಓಡಾಟಕ್ಕೆ ಹಾಗೂ ಸಾರ್ವಜನಿಕರಿಗೆ ಅನನುಕೂಲವಾಗಲೇ ಇಲ್ಲ.ಛತ್ರಪತಿ ಶಿವಾಜಿ ಮಹಾರಾಜ, ಶ್ರೀರಾಮ ಚಂದ್ರ, ದುರ್ಗಾಮಾತಾ ಸೇರಿದಂತೆ ವಿವಿಧ ಮಹಾಪುರುಷರ ಭಾವ ಚಿತ್ರಗಳನ್ನು ಪಥ ಸಂಚಲನ ನಡೆಯುವ ರಸ್ತೆ ಬದಿ ಪೂಜೆಗೊಳಿಸಿ ಅಲಂಕರಿಸಿರುವುದು ವಿಶೇಷವಾಗಿತ್ತು. ವಿವಿಧ ಮಹಾಪುರುಷರ ವೇಷಧಾರಿಗಳೂ ಗಮನ ಸೆಳೆದರು. ಮಹಿಳೆಯರು ಮಕ್ಕಳು ಪಥಸಂಚಲನದಲ್ಲಿ ಹೆಜ್ಜೆ ಹಾಕುತ್ತಿರುವ ಸ್ವಯಂ ಸೇವಕರ ಮೇಲೆ ಹೂಗಳನ್ನು ಹಾಕುತ್ತಿರುವುದು ವಿಶೇಷವಾಗಿತ್ತು. ಪಥ ಸಂಚಲನ ದಾರಿಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳು, ಕಿಕ್ಕಿರಿದ ಜನ ಸಂದಣಿ ಗಮನ ಸೆಳೆಯಿತು.ಆಕರ್ಷಕ ಘೋಷ ಮೂರು ವಿಭಾಗದಲ್ಲಿ ಪಥ ಸಂಚಲನದಲ್ಲಿ ಕಾಣಿಸಿದ್ದು ಅಲ್ಲದೆ, ಮೂರೂ ಘೋಷ್ ತಂಡದ ಕೊಳಲು ವಾದಕರಾಗಿ ಮಕ್ಕಳೇ ಪಾಲ್ಗೊಂಡುದು ಗಮನ ಸೆಳೆಯಿತು. ಮೂರು ತಂಡಗಳಲ್ಲಿ ಮಕ್ಕಳೇ ಕೊಳಲು ವಾದನ ಮಾಡುತ್ತಿದ್ದರು. ಪಥ ಸಂಚಲನದಲ್ಲಿ ಮಕ್ಕಳದೇ ಒಂದು ವಾಹಿನಿ ಸಾರ್ವಜನಿಕರ ಗಮನ ಸೆಳೆಯಿತು.ಆರ್‌ಎಸ್‌ಎಸ್‌ನ ಜಿಲ್ಲಾ ಸಂಘಚಾಲಕ ಶ್ರೀಕಾಂತ ಹುಲಮನಿ, ವಿಭಾಗ ಬೌದ್ಧಿಕ ಪ್ರಮುಖ ಗುರುರಾಜ ಕುಲಕರ್ಣಿ, ತಾಲೂಕು ಸಂಘಚಾಲಕರಾದ ಈರಣ್ಣ ಹುಗ್ಗಿ, ರವಿಶೇಖರ ಕೋರಿಶೆಟ್ಟರ ಸೇರಿದಂತೆ ಸಂಘದ ಪ್ರಮುಖರು ಪಥ ಸಂಚಲನದಲ್ಲಿದ್ದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಶಿಗ್ಗಾಂವ ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ, ಸಿಪಿಐ ಬಸವರಾಜ ಹಳಬಣ್ಣನವರ, ಶಿಗ್ಗಾಂವ ಸಿಪಿಐ ರಾಠೋಡ, ಪಿಎಸ್‌ಐ ಸಂಪತ್ತಕುಮಾರ ಆನಿಕಿವಿ, ಶರಣಪ್ಪ ಹಂಡರಗಲ್ಲ, ಎಲ್ಲಪ್ಪ ಹಿರಗಣ್ಣನವರ, ಕಟ್ಟಿಮನಿ ಪೊಲೀಸ್ ಬಂದೋಬಸ್ತನಲ್ಲಿದ್ದರು.