13ನೇ ಅಂತಾರಾಷ್ಟ್ರೀಯ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ 2025ರಲ್ಲಿ ಮಡಿಕೇರಿಯ ಬ್ರೈನೋ ಬ್ರೈನ್ ಕೇಂದ್ರದ 89 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ 13ನೇ ಅಂತಾರಾಷ್ಟ್ರೀಯ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆ-2025ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 89 ವಿದ್ಯಾರ್ಥಿಗಳು ಕೇವಲ 4 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. 38 ಚಾಂಪಿಯನ್ ಟ್ರೋಫಿ, 34 ಚಿನ್ನದ ಪದಕ ಮತ್ತು 17 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
78 ರಾಷ್ಟ್ರಗಳ ಒಟ್ಟು 23,128 ವಿದ್ಯಾರ್ಥಿಗಳು ವಿವಿಧ ರಾಷ್ಟ್ರದ ಬ್ರೈನೋಬ್ರೈನ್ ಕೇಂದ್ರಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗು ಜಿಲ್ಲೆಯ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ ಒಟ್ಟು 89 ವಿದ್ಯಾರ್ಥಿಗಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.
ಆನ್‌ಲೈನ್ ಸ್ಪರ್ಧೆಯಲ್ಲಿ 4 ನಿಮಿಷಗಳ ನಿಗಧಿತ ಸಮಯ ಮಾತ್ರವಿದ್ದು, ಮಡಿಕೇರಿ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಇಂಟರ್‌ನೆಟ್ ಕನೆಕ್ಷನ್ ಹಾಗೂ ನೆಟ್‌ವರ್ಕ್ ಸಮಸ್ಯೆ ಇದ್ದರು ಸಹ ಸವಾಲಾಗಿ ಸ್ವೀಕರಿಸಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾಗವಹಿಸಿದ ಎಲ್ಲಾ 89 ಮಕ್ಕಳು ವಿಜೇತರಾಗಿರುವುದು ಪ್ರಶಂಸನೀಯವಾಗಿದೆ ಎಂದು ಮಾಪಂಗಡ ಕವಿತಾ ಕರುಂಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಪ್ರಶಂಸೆ ಮತ್ತು ಅಭಿನಂದನೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಲ್ಲಬೇಕು. ಕರ್ನಾಟಕದಿಂದ ಭಾಗವಹಿಸಿದ ಬ್ರೈನೋಬ್ರೈನ್ ಕೇಂದ್ರಗಳ ಪೈಕಿ ಮಡಿಕೇರಿ ಕೇಂದ್ರ ಅತ್ಯಧಿಕ ಚಾಂಪಿಯನ್ಸ್ ಪಟ್ಟ ಪಡೆದಿದ್ದು, ಇದು ನಮ್ಮ ಕೇಂದ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.