ದಶಮಂಟಪಗಳ ವೈಭವದ ಶೋಭಾಯಾತ್ರೆ । ಪ್ರಶಸ್ತಿ ವಿತರಣೆಯಲ್ಲಿ ಈ ಬಾರಿಯೂ ಅಸಮಾಧಾನ
ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ
ಐತಿಹಾಸಿಕ ಮಡಿಕೇರಿ ದಸರಾದ ಶೋಭಾಯಾತ್ರೆ ಗುರುವಾರ ರಾತ್ರಿ ವೈಭವಯುತವಾಗಿ ನಡೆದಿದ್ದು, ರಾತ್ರಿ ಇಡೀ ದಶಮಂಟಪಗಳಲ್ಲಿ ಡಿಜೆ ಅಬ್ಬರ ಇರಲಿಲ್ಲ. ಈ ಬಾರಿಯೂ ಮಂಟಪ ಸ್ಪರ್ಧೆಯಲ್ಲಿ ಪ್ರಶಸ್ತಿಗಾಗಿ ತೀವ್ರ ಅಸಮಾಧಾನ ವ್ಯಕ್ತಗೊಂಡಿತ್ತು.ಹತ್ತು ಮಂಟಪಗಳು ರಾತ್ರಿ ಶೋಭಾಯಾತ್ರೆ ನಡೆಸಿ ಬೆಳಗ್ಗೆ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾಗೆ ತೆರೆ ಬಿತ್ತು.
ಮಡಿಕೇರಿ ದಸರಾ ಶೋಭಾಯಾತ್ರೆ ಇರುಳನ್ನು ಬೆಳಕಾಗಿಸುತ್ತದೆ. ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ನಡೆಯುತ್ತಿದೆ. ಇಲ್ಲಿ ರಾತ್ರಿ ದಶಮಂಟಪಗಳ ಶೋಭಾಯಾತ್ರೆ ಹಾಗೂ ಡಿಜೆಗೆ ನೃತ್ಯ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದರೆ ಈ ಬಾರಿ ರಾತ್ರಿ ಡಿಜೆ ಇಲ್ಲದ ಕಾರಣ ದಸರೆಗೆ ಬಂದಿದ್ದ ಬಹುತೇಕರು ತೀವ್ರ ನಿರಾಸೆಗೊಳಗಾದರು.ಸುಪ್ರೀಂ ಕೋರ್ಟ್ ಆದೇಶದನ್ವಯ ರಾತ್ರಿ ಡಿಜೆ ಬಳಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿತ್ತು. ಇದರಿಂದ ರಾತ್ರಿ ಮಂಟಪಗಳ ಶೋಭಾಯಾತ್ರೆ ಸಂದರ್ಭದಲ್ಲಿ ಬಹುತೇಕ ಮಂಟಪಗಳು ಡಿಜೆ ಸಂಗೀತವನ್ನು ಹಾಕಲಿಲ್ಲ. ಇದರಿಂದ ಯುವ ಸಮೂಹ ಅಸಮಾಧಾನಗೊಂಡರು. ಆದರೆ ಬೆಳಗ್ಗೆ ವಿವಿಧ ಮಂಟಪಗಳಲ್ಲಿ ಡಿಜೆ ಅಬ್ಬರ ಜೋರಾಗಿತ್ತು. ದಸರಾ ಮುಗಿದ ಬಳಿಕ ಬೆರಳೆಣಿಕೆಯ ಯುವಕರು ಡಿಜೆಗೆ ಕುಣಿದು ಕುಪ್ಪಳಿಸಿದರು.
ಪೇಟೆ ಶ್ರೀ ರಾಮ ಮಂದಿರ ಮಂಟಪ ಎಲ್ಲ ದೇವಾಲಯಗಳ ಮಂಟಪವನ್ನು ಸ್ವಾಗತಿಸಿತು. ಈ ಬಾರಿ ದೇಚೂರು ಶ್ರೀ ರಾಮ ಮಂದಿರ ದೇವಾಲಯದ ಮಂಟಪದಲ್ಲಿ ಡಿಜೆ ಬಳಕೆ ಮಾಡಿಲ್ಲ. ಬದಲಾಗಿ ವಾದ್ಯಗೋಷ್ಠಿಗೆ ಆದ್ಯತೆ ನೀಡಲಾಗಿತ್ತು.ಪ್ರಶಸ್ತಿ ಸಿಗದೆ ಅಸಮಾಧಾನ:
ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಬಹುಮಾನ ವಿಚಾರದಲ್ಲಿ ಶುಕ್ರವಾರ ಮುಂಜಾನೆ ಗಾಂಧಿ ಮೈದಾನದಲ್ಲಿ ಕರವಲೆ ಭಗವತಿ ಮಂಟಪದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಫಲಿತಾಂಶ ಪ್ರಕಟಿಸುತ್ತಿದ್ದಂತೆ ವೇದಿಕೆಗೆ ನುಗ್ಗಿ ಗಲಾಟೆ ಮಾಡಿ ವೇದಿಕೆ ಮೇಲಿದ್ದ ಪ್ರಶಸ್ತಿ ಫಲಕ, ಇತರೆ ವಸ್ತುಗಳ ಕಿತ್ತೆಸೆದರು. ಪೋಡಿಯಂ ಅನ್ನು ಕೂಡ ತೆಗೆದು ಕೆಳಗೆ ಎಸೆದರು. ಈ ಸಂದರ್ಭ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸಮಿತಿಯವರು ಮೋಸ, ಮೋಸ ಎಂದು ಘೋಷಣೆ ಕೂಗಿದರು.
ಶೋಭಾಯಾತ್ರೆ ಪ್ರಶಸ್ತಿ ವಿತರಣೆ:ಮಡಿಕೇರಿ ದಸರಾದಲ್ಲಿ ದಶ ಮಂಟಪಗಳ ಶೋಭಾಯಾತ್ರೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದೊಂದು ಮಂಟಪಗಳು ಕೂಡ ಒಂದೊಂದು ದೇವರ ಕಥಾ ಸಾರಾಂಶವನ್ನು ಹೊಂದಿತ್ತು. ಮಂಟಪಕ್ಕಾಗಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಲಾಗಿತ್ತು. ಪೇಟೆ ಶ್ರೀ ರಾಮ ಮಂದಿರ ಹಾಗೂ ದೇಚೂರು ರಾಮ ಮಂದಿರ ಮಂಟಪ ಪ್ರಶಸ್ತಿಯಿಂದ ಹಿಂದೆ ಸರಿದಿದ್ದರೆ ಉಳಿದ ಎಂಟು ಮಂಟಪಗಳು ಹಲವು ವಿಶೇಷತೆಯ ಮೂಲಕ ಮಂಟಪವನ್ನು ರಚಿಸಿ ಝಗಮಗಿಸಿ ತೀವ್ರ ಪೈಪೋಟಿ ನೀಡಿತು. ಮಡಿಕೇರಿಯ ಕೋಟೆ ಮಹಾ ಗಣಪತಿ ದೇವಾಲಯ ಮತ್ತು ಕೋಟೆ ಮಾರಿಯಮ್ಮ ದೇವಾಲಯಗಳ ಮಂಟಪಗಳು ಪ್ರಥಮ ಬಹುಮಾನ ಹಂಚಿಕೊಂಡವು. ಕಂಚಿ ಕಾಮಾಕ್ಷಿ ದೇವಾಲಯ ಮಂಟಪ ದ್ವಿತೀಯ ಸ್ಥಾನ, ದಂಡಿನ ಮಾರಿಯಮ್ಮ ದೇವಾಲಯ ತೃತೀಯ ಬಹುಮಾನ ಪಡೆಯಿತು. ಉಳಿದಂತೆ ಕರವಲೆ ಭಗವತಿ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಪೇಟೆ ಶ್ರೀ ರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಚೌಡೇಶ್ವರಿ, ಕೋದಂಡ ರಾಮ ದೇವಾಲಯಗಳ ಮಂಟಪವು ಶೋಭಾಯಾತ್ರೆ ನಡೆಸಿದವು.
ಗಲಾಟೆ: ಡಿವೈಎಸ್ಪಿಗೆ ಗಾಯ:ದಶಮಂಟಪಗಳ ಸ್ಪರ್ಧೆಯ ಬಹುಮಾನ ವಿತರಣೆ ಸಂದರ್ಭ ಉಂಟಾದ ಗಲಾಟೆಯಲ್ಲಿ ಡಿವೈಎಸ್ಪಿ ಸೂರಜ್ ಅವರಿಗೆ ಗಂಭೀರ ಗಾಯವಾಗಿದೆ.
ಬೆಳಗ್ಗೆ ಗಾಂಧಿ ಮೈದಾನದಲ್ಲಿ ದಶಮಂಟಪಗಳಿಗೆ ಬಹುಮಾನ ವಿತರಣೆ ಮಾಡುತ್ತಿದ್ದ ಸಂದರ್ಭ ಯುವಕನೊಬ್ಬ ಗಲಾಟೆ ಮಾಡುತ್ತಿದ್ದ.ಈ ಸಂದರ್ಭ ಪರಿಸ್ಥಿತಿ ನಿಯಂತ್ರಿಸಲು ಹೋಗಿದ್ದ ಡಿವೈಎಸ್ಪಿ ಸೂರಜ್ ಅವರನ್ನು ವೇದಿಕೆ ಮೇಲಿಂದ ತಳ್ಳಲಾಯಿತು. ವೇದಿಕೆಯಿಂದ ಕೆಳಕ್ಕೆ ಬಿದ್ದ ಸೂರಜ್ ಅವರ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದೆ. ಸೂರಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದ ಆರೋಪಿ ಮಡಿಕೇರಿಯ ಯಕ್ಷಿತ್ ಎಂಬಾತನನ್ನು ಬಂಧಿಸಲಾಗಿದ್ದು, ಬಿಎನ್ಎಸ್ ಆ್ಯಕ್ಟ್ 132 ಮತ್ತು 355 ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.---------
ಬಹುಮಾನ ವಿಷಯದಲ್ಲಿ ಪ್ರತೀ ವರ್ಷ ಗಲಾಟೆ ಆಗುತ್ತಿದೆ. ಹೀಗಾಗಿಯೇ ಎಲ್ಲ ಮಂಟಪಗಳಿಗೂ ಸಮಾಧಾನಕರ ಪ್ರಶಸ್ತಿ ಘೋಷಿಸುವಂತೆ ಸಲಹೆ ನೀಡಲಾಗಿತ್ತು. ಅದನ್ನು ನಿರಾಕರಿಸಿ ತೀರ್ಪುಗಾರಿಕೆ ನಡೆಸಿ ಪ್ರಶಸ್ತಿ ಘೋಷಿಸಲಾಗಿದೆ. ಹೀಗಾಗಿ ಇದಕ್ಕೆ ಕಾರಣರಾದವರ ಮೇಲೂ ಪ್ರಕರಣ ದಾಖಲಿಸಲಾಗುವುದು. ದೇವಾಲಯ ಸಮಿತಿ ಮೇಲೂ ಕ್ರಮ ಕೈಗೊಳ್ಳಲಾಗುವುದು. ನಮ್ಮ ಪಿಎಸ್ಐ ಮೇಲೂ ಹಲ್ಲೆ ಮಾಡಲಾಗಿದೆ.। ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ