ಜನೋತ್ಸವ ದಸರಾ: ಕರವಲೆ ಭಗವತಿ ಮಂಟಪ ಪ್ರಥಮ

KannadaprabhaNewsNetwork |  
Published : Oct 23, 2026, 02:15 AM IST
ಚಿತ್ರ :  22ಎಂಡಿಕೆ3 : ಕರವಲೆ ಭಗವತಿ ದೇವಾಲಯದ ಮಂಟಪಕ್ಕೆ ಪ್ರಥಮ ಬಹುಮಾನ. | Kannada Prabha

ಸಾರಾಂಶ

ಐತಿಹಾಸಿ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆ ದಶ ಮಂಟಪಗಳ ಶೋಭಾಯಾತ್ರೆಯಲ್ಲಿ ಕರವಲೆ ಭಗವತಿ ದೇವಾಲಯದ ಮಂಟಪ ಪ್ರಥಮ ಬಹುಮಾನವನ್ನು ಗಳಿಸಿತು. ಕಂಚಿ ಕಾಮಾಕ್ಷಿ ದ್ವಿತೀಯ ಹಾಗೂ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ತೃತೀಯ ಬಹುಮಾನ ಪಡೆದುಕೊಂಡಿತು.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆ ದಶ ಮಂಟಪಗಳ ಶೋಭಾಯಾತ್ರೆಯಲ್ಲಿ ಕರವಲೆ ಭಗವತಿ ದೇವಾಲಯದ ಮಂಟಪ ಪ್ರಥಮ ಬಹುಮಾನವನ್ನು ಗಳಿಸಿತು. ಕಂಚಿ ಕಾಮಾಕ್ಷಿ ದ್ವಿತೀಯ ಹಾಗೂ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ತೃತೀಯ ಬಹುಮಾನ ಪಡೆದುಕೊಂಡಿತು. ಪೇಟೆ ಶ್ರೀರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಕಂಚಿ ಕಾಮಾಕ್ಷಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಶ್ರೀ ಕೋದಂಡ ರಾಮ ದೇವಾಲಯ, ಶ್ರೀ ಕೋಟೆ ಮಹಾಗಣಪತಿ ದೇವಾಲಯ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ಕರವಲೆ ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯ, ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.

ಒಂದೊಂದು ಮಂಪಟಗಳು ಕೂಡ ಈ ಬಾರಿ ವಿಶೇಷವಾಗಿ ಮೂಡಿಬಂದವು. ಆದರೆ ಕೆಲವು ಮಂಟಪಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಕೂಡ ತಮ್ಮ ಮಂಟಪದಲ್ಲಿನ ಚಲನವಲನದಲ್ಲಿ ಆದ ಸಮಸ್ಯೆಯಿಂದಾಗಿ ಪ್ರಶಸ್ತಿಗೆ ಅರ್ಹವಾಗಿದ್ದರೂ ರೇಸ್ ನಿಂದ ಹಿಂದೆ ಸರಿಯುವಂತಾಯಿತು. ಈ ಬಾರಿ ವಿಶೇಷವಾಗಿ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಹಾಗೂ ಚೌಡೇಶ್ವರಿ ದೇವಾಲಯದ ಮಂಟಪದಲ್ಲಿ ಡ್ರೋನ್ ಮೂಲಕ ಎಲ್ ಇಡಿ ಪರದೆ ಕಂಡುಬಂತು. ಕೋಟೆ ಗಣಪತಿ ದೇವಾಲಯದಿಂದ ಸುಮಾರು 51 ಅಡಿಯ ಆರ್ಚ್ ಬೋರ್ಡ್ ನಿರ್ಮಿಸಲಾಗಿತ್ತು.

ಕಳೆದ ವರ್ಷ ಪ್ರಶಸ್ತಿ ವಿತರಣೆ ಸಂದರ್ಭ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಬಾರಿ ಬಹುಮಾನ ಪಡೆದ ಮಂಟಪ ಸಮಿತಿಯಿಂದ ಇಬ್ಬರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ವೇದಿಕೆಯ ಸುತ್ತ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿತ್ತು.

ಮಂಟಪಗಳಲ್ಲಿ ಪಟಾಕಿ ಅಬ್ಬರ : ಈ ಬಾರಿಯ ದಶ ಮಂಟಪಗಳ ಶೋಭಾಯಾತ್ರೆಯ ಬಹುತೇಕ ಮಂಟಪಗಳ ಪ್ರದರ್ಶನ ಸಂದರ್ಭದಲ್ಲಿ ಪಟಾಕಿಯ ಅಬ್ಬರ ಹೆಚ್ಚಾಗಿತ್ತು. ಕೋದಂಡ ರಾಮ, ಕೋಟೆ ಮಾರಿಯಮ್ಮ ದೇವಾಲಯದ ಮಂಟಪಗಳಲ್ಲಿ ಅತಿ ಹೆಚ್ಚು ಪಟಾಕಿಗಳನ್ನು ಸಿಡಿಸಲಾಯಿತು. ಪಟಾಕಿಯಿಂದಾಗಿ ಕಟ್ಟಡಗಳ ಮೇಲೆ ಕುಳಿತು ಮಂಟಪಗಳನ್ನು ವೀಕ್ಷಿಸುತ್ತಿದ್ದವರಿಗೆ ಪಟಾಕಿಯ ಕಿಡಿಗಳು ಹಾರಿತು.

ಮಾತಿನ ಚಕಮಕಿ: ಕೋಟೆ ಮಹಾಗಣಪತಿ ಮಂಟಪದ ತೀರ್ಪುಗಾರಿಕೆಯ ಪ್ರದರ್ಶನ ರಾತ್ರಿ 11.30ಕ್ಕೆ ಪೊಲೀಸ್ ಠಾಣೆಯ ಮುಂಭಾಗ ನಡೆಯಿತು. ಇದೇ ಸ್ಥಳದಲ್ಲಿ ದಂಡಿನ ಮಾರಿಯಮ್ಮ ದೇವಾಲಯ ಮಂಟಪ ತೀರ್ಪುಗಾರಿಕೆ ಪ್ರದರ್ಶನ 4 ಗಂಟೆಗೆ ನಡೆಯಬೇಕಿತ್ತು. ಆದರೆ ಕೋಟೆ ಗಣಪತಿಯ ಮಂಟಪವಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ದಂಡಿನ ಮಾರಿಯಮ್ಮ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ದಶ ಮಂಟಪ ಸಮಿತಿ ಅಧ್ಯಕ್ಷರು ತೀರ್ಪುಗಾರಿಕೆಗೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಮಂಟಪ ಮುಂದಕ್ಕೆ ಕೊಂಡೊಯ್ಯದೇ ಇದ್ದಲ್ಲಿ ಕೋಟೆ ಗಣಪತಿ ಮಂಟಪದ ತೀರ್ಪುಗಾರಿಕೆಯಲ್ಲಿ ಬಂದ 5 ಅಂಕಗಳನ್ನು ಕಡಿತಗೊಳಿಸುವುದಾಗಿ ಸೂಚಿಸಿದರು. ಇದಕ್ಕೆ ಕೋಟೆ ಗಣಪತಿ ಸದಸ್ಯರು ತೀವ್ರ ಅಸಮಾಧಾನಗೊಂಡರು. ಮಂಟಪಕ್ಕೆ ಮುಂದಕ್ಕೆ ತೆಗೆದಿದ್ದೇವೆ. ನೀವು ಮುಂದೆ ಬನ್ನಿ ಎಂದು ದಂಡಿನ ಮಾರಿಯಮ್ಮ ಮಂಟಪ ಸಮಿತಿಯವರಿಗೆ ತಿಳಿಸಿದರು. ಇದರಿಂದ ಅರ್ಧ ತಾಸು ಎರಡು ಸಮಿತಿಗಳ ನಡುವೆ ಗೊಂದಲ ಉಂಟಾಗಿತ್ತು. ಎರಡು ಸಮಿತಿಯವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಮೈಕ್ ಕೂಡ ಆನ್ ಆಗಿದ್ದರಿಂದ ಸಮಿತಿಯವರ ಗೊಂದಲ ಸೇರಿದ್ದ ಜನರಿಗೆ ತಿಳಿಯಿತು.

ಪ್ರಶಸ್ತಿ ಘೋಷಣೆ ಮುನ್ನವೇ ತೆರಳಿದರು!: ದಶಮಂಟಪಗಳ ಶೋಭಾಯಾತ್ರೆಯ ಪ್ರಶಸ್ತಿ ಘೋಷಣೆ ಗುರುವಾರ ಮುಂಜಾನೆ ನಡೆಯಿತು. ಆದರೆ ಪ್ರಶಸ್ತಿ ಘೋಷಣೆಗೂ ಮುನ್ನವೇ ಕೋಟೆ ಮಹಾಗಣಪತಿ ದೇವಾಲಯ ಸಮಿತಿ ಸದಸ್ಯರು ಅಸಮಾಧಾನಗೊಂಡು ಸಭಾಂಗಣದಿಂದ ತೆರಳಿದರು. ವೇದಿಕೆಯ ಮುಂಭಾಗ ಕುಳಿತಿದ್ದ ಸಮಿತಿಯ ಅಧ್ಯಕ್ಷ ಶರಣ್ ಪೂಣಚ್ಚ, ವೇದಿಕೆಯ ಮೇಲಿದ್ದ ನಗರಸಭೆ ಸದಸ್ಯೆ ಸವಿತಾ ರಾಕೇಶ್ ವೇದಿಕೆಯಿಂದ ಇಳಿದು ಹೊರ ನಡೆದರು. 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದ ಕೋಟೆ ಗಣಪತಿ ದೇವಾಲಯ ಮಂಟಪ ಸಮಿತಿ ಈ ಬಾರಿ ಕೂಡ ಪ್ರಥಮ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಪ್ರಶಸ್ತಿ ದೊರಕುವ ನಿರೀಕ್ಷೆ ಸಮಿತಿಯವರಲ್ಲಿತ್ತು. ಆದರೆ ಪ್ರಶಸ್ತಿ ಬಾರದ ಹಿನ್ನೆಲೆಯಲ್ಲಿ ಸಮಿತಿಯವರಿಗೆ ತೀವ್ರ ಬೇಸರ ಮೂಡಿಸಿತು. ಇದರಿಂದಲೇ ಸದಸ್ಯರು ಹೊರ ನಡೆದರು. ಮೂರನೇ ಬಹುಮಾನ ಬಂದ್ರೂ ಪ್ರಶಸ್ತಿ ಇಲ್ಲ!

50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸಿಕೊಂಡ ಕೋಟೆ ಮಹಾ ಗಣಪತಿ ದೇವಾಲಯದ ಮಂಟಪಕ್ಕೆ ತೀರ್ಪುಗಾರರು ಅಂಕ ನೀಡಿದ ಪ್ರಕಾರ ತೃತೀಯ ಬಹುಮಾನ ದೊರಕಬೇಕಿತ್ತು. ಆದರೆ ಕೋಟೆ ಮುಂಭಾಗದಲ್ಲಿ ದಂಡಿನ ಮಾರಿಯಮ್ಮ ಸಮಿತಿಯ ಮಂಟಪಕ್ಕೆ ತಮ್ಮ ಮಂಟಪ ತೆರವುಗೊಳಿಸಲಿಲ್ಲ ಎಂಬ ಕಾರಣಕ್ಕಾಗಿ ಮೂರನೇ ಬಹುಮಾನ ಬಂದಿದ್ದರೂ ಕೂಡ ಕೋಟೆ ಗಣಪತಿಯ ಮಂಟಪಕ್ಕೆ ಪ್ರಶಸ್ತಿ ನೀಡಿಲ್ಲ. 89 ಅಂಕ ಪಡೆದಿದ್ದರೂ ಕೂಡ 87.5 ಅಂಕ ಪಡೆದಿದ್ದ ಕೋಟೆ ಮಾರಿಯಮ್ಮ ಮಂಟಪಕ್ಕೆ ತೃತೀಯ ಬಹುಮಾನ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ
ಇಂದು ‘ಬನ’ ತುಳು ಚಿತ್ರ ಕರಾವಳಿಯಲ್ಲಿ ಬಿಡುಗಡೆ