ಸಿ.ಕೆ. ನಾಗರಾಜ ಹೊಸಪೇಟೆ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಹಾನವಮಿ ದಿಬ್ಬದಲ್ಲಿ ನವರಾತ್ರಿಯ 9 ದಿನಗಳ ಕಾಲ ದಸರಾ ಹಬ್ಬವನ್ನು ಅಂತ್ಯಂತ ವೈಭವದಿಂದ ಆಚರಿಸಲಾಗುತ್ತಿತ್ತು. ಹಂಪಿಯ ಮಹಾನವಮಿ ದಿಬ್ಬದಲ್ಲಿ ದಸರಾ ಹಬ್ಬದ ಯಾವುದೇ ಕಾರ್ಯಕ್ರಮ ನಡೆಯದೇ ಮಹಾನವಮಿ ದಿಬ್ಬ ಬಿಕೋ ಎನ್ನುತ್ತಿವೆ.
ಹಂಪಿಯ ಮಹಾನವಮಿ ದಿಬ್ಬವು ಅಂದಿನ ದಸರಾ ಆಚರಣೆಯ ಪ್ರಮುಖ ಕೇಂದ್ರವಾಗಿತ್ತು. ಶ್ರೀಕೃಷ್ಣದೇವರಾಯ ಓಡಿಶಾದ ಮೇಲೆ ವಿಜಯ ಸಾಧಿಸಿದ ನಂತರ ಮಹಾನವಮಿ ದಿಬ್ಬ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಆದರೆ ಮೈಸೂರು ದಸರಾಗೆ ಪ್ರೇರಣೆಯಾಗಿದ್ದ ಹಂಪಿಯ ಮಹಾನವಮಿ ದಿಬ್ಬದಲ್ಲಿ ನಿರವ ಮೌನ ಆವರಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.ಮಹಾನವಮಿ ದಿಬ್ಬದಲ್ಲಿ ಸದ್ಯಕ್ಕೆ ಮೂರು ಸ್ತರಗಳ ವಿಶಾಲವಾದ ವೇದಿಕೆ ಮಾತ್ರ ಇದೆ. ತಳ ವಿಸ್ತಾರ 40 ಚದರ ಮೀಟರ್ ಇದ್ದು, ಮೇಲು ಸ್ತರ 24 ಮೀ ವಿಸ್ತೀರ್ಣ ಹೊಂದಿದೆ. ಪ್ರತಿಯೊಂದು ಸ್ತರದಲ್ಲಿಯೂ ಗ್ರಾನೈಟ್ ಕಲ್ಲು ಅಳವಡಿಸಲಾಗಿದ್ದು, ಮಹಾನವಮಿ ದಿಬ್ಬವು 12 ಮೀಟರ್ ಎತ್ತರವಿರುವ ಈ ಕಲ್ಲಿನ ಗೋಡೆಗಳ ಮೇಲೆ ರಾಯಭಾರಿಗಳು, ಸೈನಿಕರು, ನರ್ತಕಿಯರು, ಸಂಗೀತಗಾರರು ಹಾಗೂ ಆನೆ ಕುದುರೆಗಳ ಸುಂದರ ಕೆತ್ತನೆ ಗಮನ ಸೆಳೆಯುತ್ತವೆ.
ವಿಜಯನಗರ ಸಾಮ್ರಾಜ್ಯದ ದೊರೆಗೆ ಮಾಂಡಲೀಕರು ಹಾಗೂ ವಿದೇಶಿ ರಾಯಭಾರಿಗಳು ಇದೇ ವೇದಿಕೆಯಲ್ಲಿ ರತ್ನ, ವಜ್ರ, ಸುವರ್ಣ ಕಾಣಿಕೆ ಸಲ್ಲಿಸುತ್ತಿದ್ದರು. ಅಲ್ಲದೆ ಆನೆ, ಕುದುರೆ ಹಾಗೂ ಕಾಲ್ದಳಗಳ ವೈಭವದ ಮೆರವಣಿಗೆ ರಾಜರು ಇಲ್ಲಿಂದ ವೀಕ್ಷಿಸುತ್ತಿದ್ದರು. ಕಲಾವಿದರು, ನೃತ್ಯಗಾರರು, ಸಂಗೀತಗಾರರು ತಮ್ಮ ಜಾನಪದ ಮತ್ತು ಶಾಸ್ತ್ರೀಯ ಕಲೆ ಪ್ರದರ್ಶಿಸುತ್ತಿದ್ದರು. ಇಂದಿಗೂ ಮಹಾನವಮಿ ದಿಬ್ಬದ ಸುತ್ತಲೂ ಇದರ ಅದ್ಭುತ ಕುರುಹು ಜೀವಂತವಾಗಿವೆ.
ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಮಹಾನವಮಿ ದಿಬ್ಬದಲ್ಲಿ ದಸರಾ ಹಬ್ಬದ ನವರಾತ್ರಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿತ್ತು. ರಾಜರು ಪ್ರಜೆಗಳೊಂದಿಗೆ ದಸರಾ ಹಬ್ಬ ಆಚರಣೆ ಮಾಡುತ್ತಿದ್ದು ವಿಶೇಷವಾಗಿತ್ತು. ಮೈಸೂರು ದಸರಾಕ್ಕೆ ಪ್ರೇರಣೆಯಾದ ಹಂಪಿಯ ಮಹಾನವಮಿಯಲ್ಲಿ ದಸರಾ ಹಬ್ಬದಂದು ಯಾವುದೇ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಮುಂದಾಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಈ ಹಿನ್ನೆಲೆ ಹಂಪಿ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಎಚ್.ಎಂ. ಚಂದ್ರಶೇಖರ್ ಶಾಸ್ತ್ರಿ ತಿಳಿಸಿದ್ದಾರೆ.