ಭಾಗ್ಯನಗರದ ನೀರಿನ ದಾಹ ನೀಗಿಸಲು ನಗರಸಭೆಗೆ ಮೊರೆ!

KannadaprabhaNewsNetwork |  
Published : Oct 23, 2026, 02:15 AM IST
ಫೋಟೋ ಕ್ಯಾಪ್ಷನ್‌: ಭಾಗ್ಯನಗರದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿರುವುದು. | Kannada Prabha

ಸಾರಾಂಶ

ಕೊಪ್ಪಳ ನಗರಸಭೆಗೆ ಪೂರೈಕೆಯಾಗುವ ತುಂಗಭದ್ರಾ ನದಿಯ ನೀರಿನಲ್ಲಿ ಒಂದು ಭಾಗವನ್ನು ಭಾಗ್ಯನಗರಕ್ಕೂ ಒದಗಿಸುವಂತೆ ಮನವಿ ಮಾಡಲು ಭಾಗ್ಯನಗರ ಪಪಂ ಉದ್ದೇಶಿಸಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಭಾಗ್ಯನಗರಕ್ಕೆ ಇಂದಿಗೂ ಕೊಳವೆಬಾವಿಗಳ ನೀರೇ ಆಸರೆ. ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪಟ್ಟಣದ ಜನರು ಸ್ಥಳೀಯ ಕೊಳವೆಬಾವಿಗಳನ್ನೇ ಅವಲಂಬಿಸಿದ್ದಾರೆ. ಇದೀಗ ಮಳೆಗಾಲದಲ್ಲಿಯೇ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, 60 ಕೊಳವೆಬಾವಿಗಳ ಪೈಕಿ 10 ವಿಫಲವಾಗಿವೆ. ಹೀಗಾಗಿ ನೀರಿನ ಸಮಸ್ಯೆ ಉಲ್ಬಣಿಸುವ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಕೊಪ್ಪಳ ನಗರಸಭೆಯಿಂದ ನೀರು ಪೂರೈಸುವಂತೆ ಭಾಗ್ಯನಗರ ಪಪಂ ಮನವಿ ಮಾಡಲು ಮುಂದಾಗಿದೆ.

3 ದಿನಕ್ಕೊಮ್ಮೆ 15 ಲಕ್ಷ ಲೀಟರ್ ಬೇಡಿಕೆ: ಭಾಗ್ಯನಗರದ ಸುಮಾರು 8 ಸಾವಿರ ಮನೆಗಳ ಪೈಕಿ ಶೇ. 90ರಷ್ಟು ಮನೆಗಳಿಗೆ ಅಮೃತ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸಲಾಗಿದೆ. ಕೊಪ್ಪಳ ನಗರಸಭೆಯಿಂದ ನೀರು ಪೂರೈಸುವ ಪ್ರಾಯೋಗಿಕ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ, ಭಾಗ್ಯನಗರಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಯೋಜನೆಯ ಜಲಶುದ್ಧೀಕರಣ ಘಟಕದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಈ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಭಾಗ್ಯನಗರಕ್ಕೆ ಮೂರು ದಿನಕ್ಕೊಮ್ಮೆ 15 ಲಕ್ಷ ಲೀಟರ್ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕೊಳವೆಬಾವಿಗಳು ವಿಫಲವಾಗಿರುವುದು ಹಾಗೂ ಉಳಿದ ಬೋರ್‌ವೆಲ್‌ಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ತುರ್ತಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅಗತ್ಯ ಎದುರಾಗಿದೆ.

ಮಳೆಗಾಲದಲ್ಲೇ ಟ್ಯಾಂಕರ್ ನೀರಿನ ಆಸರೆ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ನೀರಿನ ಸಮಸ್ಯೆ ಈ ಬಾರಿ ಮಳೆಗಾಲದಲ್ಲಿಯೇ ಭಾಗ್ಯನಗರವನ್ನು ಕಾಡುತ್ತಿದೆ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿರುವುದರಿಂದ ಅಗತ್ಯವಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ.

ತುಂಗಭದ್ರಾ ನೀರು ಇನ್ನೂ ಮರೀಚಿಕೆ: ಕೊಪ್ಪಳ ನಗರ ಮತ್ತು ಭಾಗ್ಯನಗರಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಯೋಜನೆ ರೂಪಿಸಲಾಗಿದ್ದರೂ, ವಿದ್ಯುತ್ ಬಿಲ್ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಭಾಗ್ಯನಗರಕ್ಕೆ ಯೋಜನೆಯ ನೀರು ಪೂರೈಕೆಯಾಗಿರಲಿಲ್ಲ. ಹೀಗಾಗಿ ಪಟ್ಟಣವು ಕೊಳವೆಬಾವಿಗಳನ್ನೇ ಅವಲಂಬಿಸುವಂತಾಗಿದೆ.

ಇದೀಗ ತುಂಗಭದ್ರಾ ನದಿಯಿಂದ ನೀರು ಪೂರೈಸುವ ಮೂರನೇ ಹಂತದ ಯೋಜನೆಯಲ್ಲಿ ಭಾಗ್ಯನಗರಕ್ಕೆ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ. ಯೋಜನೆಯಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕವಷ್ಟೇ ತುಂಗಭದ್ರಾ ನದಿಯ ನೀರು ಭಾಗ್ಯನಗರಕ್ಕೆ ಪೂರೈಕೆಯಾಗಲಿದೆ. ಅಲ್ಲಿಯ ವರೆಗೆ ಕೊಪ್ಪಳ ನಗರಸಭೆಗೆ ಪೂರೈಕೆಯಾಗುವ ತುಂಗಭದ್ರಾ ನದಿಯ ನೀರಿನಲ್ಲಿ ಒಂದು ಭಾಗವನ್ನು ಭಾಗ್ಯನಗರಕ್ಕೂ ಒದಗಿಸುವಂತೆ ಮನವಿ ಮಾಡಲು ಉದ್ದೇಶಿಸಲಾಗಿದೆ.

ಕೋರಿದ್ದೇವೆ: ಕೆಲವು ಕೊಳವೆಬಾವಿಗಳು ವಿಫಲವಾಗಿದ್ದು, ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಕೊಪ್ಪಳ ನಗರಕ್ಕೆ ಪೂರೈಕೆಯಾಗುವ ತುಂಗಭದ್ರಾ ನದಿಯ ನೀರನ್ನು ಭಾಗ್ಯನಗರಕ್ಕೂ ಪೂರೈಸುವಂತೆ ಕೋರಿದ್ದೇವೆ ಎಂದು ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಹ್ಯಾಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ
ಇಂದು ‘ಬನ’ ತುಳು ಚಿತ್ರ ಕರಾವಳಿಯಲ್ಲಿ ಬಿಡುಗಡೆ