ಪಟ್ಟಣದ ಹಿರೇಬಣದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವು ವಿಜಯದಶಮಿ ಅಂಗವಾಗಿ ರಥೋತ್ಸವ ಕಾರ್ಯಕ್ರಮವು ಮಂಗಳವಾರ ವೈಭವದಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದ ಹಿರೇಬಣದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವು ವಿಜಯದಶಮಿ ಅಂಗವಾಗಿ ರಥೋತ್ಸವ ಕಾರ್ಯಕ್ರಮವು ಮಂಗಳವಾರ ವೈಭವದಿಂದ ನೆರವೇರಿತು.
ನವರಾತ್ರಿಯ ಹಬ್ಬದ ಅಂಗವಾಗಿ ಕಳೆದ 9 ದಿನಗಳಿಂದ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜಾ ಕಂಕೈರ್ಯ ಹಮ್ಮಿಕೊಳ್ಳಲಾಗಿತ್ತು. ನಿತ್ಯ ಕಾಕಡಾರತಿ, ಭಜನೆ, ಉಪನ್ಯಾಸ, ವಿಶೇಷ ಪೂಜೆ, ಅಲಂಕಾರಗಳು ಜರುಗಿದವು. ನಿತ್ಯ ಸಂಜೆ ವಿವಿಧ ವಾಹನಗಳ ಮೇಲೆ ವೆಂಕಟೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯು ಸಂಪ್ರದಾಯದಂತೆ ಜರುಗಿತು.
ಮಂಗಳವಾರ ಸಂಪ್ರದಾಯದಂತೆ ಮುಂಜಾನೆ ಪಲ್ಲಕ್ಕಿ ಉತ್ಸವ ನಂತರ ೧೦ ಗಂಟೆಗೆ ರಥೋತ್ಸವ ಕಾರ್ಯಕ್ರಮವು ನಡೆಯಿತು.
ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವ ಹಳ್ಳದಕೇರಿಯ ಮಾರುತಿ ದೇವಸ್ಥಾನಕ್ಕೆ ತಲುಪಿ ಅಲ್ಲಿಂದ ದೇವಸ್ಥಾನಕ್ಕೆ ಮರಳಿ ತಲುಪಿತು. ದಾರಿಯುದ್ದಕ್ಕೂ ವೆಂಕಟೇಶ್ವರ ನಾಮಸ್ಮರಣೆ, ಭಜನೆ, ಭಕ್ತಿಗೀತೆಗಳು ರಥೋತ್ಸವಕ್ಕೆ ಧಾರ್ಮಿಕ ಕಳೆ ನೀಡಿದ್ದವು. ನಂತರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ ಗುಡಿ ವಿಜಯದಶಮಿಯ ಮಹತ್ವ ವಿವರಿಸಿದರು. ಬನ್ನಿ ವಿನಿಮಯದಿಂದ ಪರಸ್ಪರರಲ್ಲಿ ದ್ವೇಷ ಭಾವನೆ ಕಡಿಮೆಯಾಗಿ ಉತ್ತಮ ಬಾಂಧವ್ಯ ವೃದ್ಧಿಯಾಗುವಂತೆ ಮಾಡುತ್ತದೆ. ನಮ್ಮಲ್ಲಿರುವ ದ್ವೇಷಭಾವನೆ ಕಡಿಮೆಯಾಗಿ ಎಲ್ಲರೂ ಪರಸ್ಪರ ಕಲೆತು ನಡೆದರೆ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಾಗುತ್ತದೆ ಎಂದು ನುಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.