ಕರ್ತವ್ಯನಿರತ ಪೊಲೀಸ್ ಹುತಾತ್ಮರ ದೇಶಪ್ರೇಮ ಮತ್ತು ತ್ಯಾಗ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು.
ಕನ್ನಡಪ್ರಭ ವಾರ್ತೆ ಗದಗ
ಕರ್ತವ್ಯನಿರತ ಪೊಲೀಸ್ ಹುತಾತ್ಮರ ದೇಶಪ್ರೇಮ ಮತ್ತು ತ್ಯಾಗ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಹುತಾತ್ಮರ ಸ್ಮರಣೆ ಎಂದರೆ ಅವರ ಹೆಸರುಗಳನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ, ಅವರ ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಗದಗ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಗಂಗಾಧರ ಸಿ.ಎಂ. ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
1959ರ ಅ. 21ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಚೀನಾದ ಸಶಸ್ತ್ರ ಪಡೆಗಳ ವಿರುದ್ಧ ಹೋರಾಡಿ ಸಿಆರ್ಪಿಎಫ್ನ 10 ಯೋಧರು ಪ್ರಾಣಾರ್ಪಣೆ ಮಾಡಿದರು. ಅವರ ಬಲಿದಾನದ ನೆನಪಿಗಾಗಿ ಪ್ರತಿವರ್ಷ ಅ. 21ರಂದು ಈ ದಿನವನ್ನು ಆಚರಿಸಲಾಗುತ್ತದೆ ಎಂದು ಸ್ಮರಿಸಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ, ಮಾದಕ ವಸ್ತು ಜಾಲ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಇಲಾಖೆಗೆ ನೂತನ ಸವಾಲಾಗಿವೆ. ಇವುಗಳನ್ನು ಎದುರಿಸಲು ಆಧುನಿಕ ತಂತ್ರಜ್ಞಾನ ಹಾಗೂ ನಿರಂತರ ತರಬೇತಿ ಅಗತ್ಯ. ಅಪರಾಧ ಮುಕ್ತ ಸಮಾಜಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಹಾಗೆಯೇ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಮಾನಸಿಕ ದೈಹಿಕ ಕ್ಷೇಮ, ವಿಶ್ರಾಂತಿ ಮತ್ತು ಆರೋಗ್ಯದ ಬಗ್ಗೆಯೂ ಸಮಾಜ ಕಾಳಜಿ ವಹಿಸಬೇಕು ಎಂದರು.
ಗದಗ ಎಸ್ಪಿ ಮಿಥುನ್ ಎಚ್. ಎನ್. ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು. ಹುತಾತ್ಮರ ಹೆಸರನ್ನು ವಾಚಿಸಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿಗಳಾದ ಮಹಾಂತೇಶ್ ಸಜ್ಜನ, ಮುರ್ತುಜಾ ಖಾದ್ರಿ, ಪ್ರಭುಗೌಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಡಿಎಆರ್ ಆರ್ ಪಿಐ ಶಂಕರಗೌಡ ಪಾಟೀಲ ಕವಾಯತು ನಡೆಸಿಕೊಟ್ಟರು. ಪ್ರೊ. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.