2 ತಿಂಗಳಾದರೂ ಬಾರದ ಕೂಲಿ ಹಣ, ಕಾರ್ಮಿಕರಿಗೆ ಸಂಕಷ್ಟ

KannadaprabhaNewsNetwork |  
Published : Oct 23, 2026, 02:15 AM IST
ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಕೆರೆಯಲ್ಲಿ ಕೆಲಸ ಮಾಡಿರುವ ಕೇಸೂರು ಗ್ರಾಮದ ಕೂಲಿಕಾರರು. | Kannada Prabha

ಸಾರಾಂಶ

ಮಳೆ ಕೈಕೊಟ್ಟು ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹೊಲಗಳಲ್ಲಿ ಕೃಷಿ ಕೆಲಸವಿಲ್ಲದೆ ಗ್ರಾಮೀಣ ಕೂಲಿಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿಯಲ್ಲಿ ದುಡಿದ ಕೇಸೂರಿನ ಕೂಲಿಕಾರ್ಮಿಕರಿಗೆ 2 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಮಳೆ ಕೈಕೊಟ್ಟು ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹೊಲಗಳಲ್ಲಿ ಕೃಷಿ ಕೆಲಸವಿಲ್ಲದೆ ಗ್ರಾಮೀಣ ಕೂಲಿಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿಯಲ್ಲಿ ದುಡಿದ ಕೇಸೂರಿನ ಕೂಲಿಕಾರ್ಮಿಕರಿಗೆ 2 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ.

ತಾಲೂಕಿನ ವಣಗೇರಿ ಗ್ರಾಮದ ಕೆರೆಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಳೆದ ಆಗಸ್ಟ್‌ನಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿತ್ತು. ಕೇಸೂರು, ಬಿಜಕಲ್ ಹಾಗೂ ತಳುವಗೇರಾ ಗ್ರಾಪಂ ವ್ಯಾಪ್ತಿಯ ಕಾರ್ಮಿಕರು ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು. ಬಿಸಿಲಿನ ಝಳ ಲೆಕ್ಕಿಸದೆ ಬೆವರು ಸುರಿಸಿ ದುಡಿದರೂ, ಕೇಸೂರು ಗ್ರಾಮದ ಕಾರ್ಮಿಕರಿಗೆ ಮಾತ್ರ ಕೂಲಿ ಹಣ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಳೆ ಕೊರತೆಯಿಂದ ಹೊಲಗಳಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿವೆ. ಕೃಷಿ ಕೂಲಿ ಕೆಲಸವನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ದುಡಿಮೆ ದೊರೆಯುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆಯಡಿ ನಡೆಯುವ ಕಾಮಗಾರಿಯಲ್ಲಿ ಸಿಗುವ ಕೂಲಿ ಹಣವೇ ಮಕ್ಕಳ ಶಾಲಾ ವೆಚ್ಚ, ದಿನಸಿ ಖರೀದಿ ಹಾಗೂ ಕುಟುಂಬದ ನಿತ್ಯದ ಖರ್ಚುಗಳಿಗೆ ಆಸರೆಯಾಗಿತ್ತು. ಆದರೆ, ದುಡಿದ ಹಣವೇ ಸಕಾಲಕ್ಕೆ ಸಿಗದಿರುವುದರಿಂದ ಬಡ ಕುಟುಂಬಗಳ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಪಾವತಿ ವಿಳಂಬಕ್ಕೆ ಕಾರಣವೇನು?: ಒಂದೇ ಕಾಮಗಾರಿಯಲ್ಲಿ ವಿವಿಧ ಗ್ರಾಮಗಳ ಕಾರ್ಮಿಕರು ಪಾಲ್ಗೊಂಡಿದ್ದರೂ ಕೇಸೂರು ಗ್ರಾಮದ ಕಾರ್ಮಿಕರಿಗೆ ಪಾವತಿ ವಿಳಂಬವಾಗಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಮೂಡಿದೆ. ಮಸ್ಟರ್‌ ರೋಲ್‌, ಹಾಜರಾತಿ ದಾಖಲೆ ಹಾಗೂ ಕೂಲಿ ಪಾವತಿಯ ಸ್ಥಿತಿಗತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕಿದೆ. ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಅವುಗಳನ್ನು ತ್ವರಿತವಾಗಿ ಪರಿಹರಿಸಿ ಬಾಕಿ ಕೂಲಿ ಪಾವತಿಸಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.

ಬರಗಾಲದ ಸಂಕಷ್ಟದಲ್ಲಿ ಗ್ರಾಮೀಣ ಬಡವರಿಗೆ ಆಸರೆಯಾಗಬೇಕಾದ ವಿಬಿ ಜಿ ರಾಮ್‌ ಜಿ ಯೋಜನೆಯ ಕೂಲಿ ಹಣ ವಿಳಂಬವಾಗಿರುವುದು ಕಾರ್ಮಿಕರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ. ಅಧಿಕಾರಿಗಳು ಕೂಡಲೇ ಸ್ಪಂದಿಸಿ ದುಡಿದ ಹಣ ಪಾವತಿಸಬೇಕೆಂಬುದು ಕೂಲಿಕಾರರ ಒತ್ತಾಯವಾಗಿದೆ.

ಕಾರ್ಮಿಕರ ಅಳಲು: ಮಳೆ ಇಲ್ಲದೆ ಹೊಲಗಳಲ್ಲಿ ಕೆಲಸ ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆಯ ಕಾಮಗಾರಿಯಲ್ಲಿ ದುಡಿದಿದ್ದೇವೆ. ಆ ಹಣದಿಂದ ಕುಟುಂಬದ ಖರ್ಚು ನಿಭಾಯಿಸಬಹುದು ಎಂದುಕೊಂಡಿದ್ದೆವು. ಆದರೆ, ಎರಡು ತಿಂಗಳಾದರೂ ಕೂಲಿ ಬಂದಿಲ್ಲ. ಮಕ್ಕಳ ಖರ್ಚು, ದಿನಸಿ ಖರೀದಿಗೂ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೇ ನಮ್ಮ ಕೂಲಿ ಹಣ ಕೊಡಿಸಬೇಕು ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಸ್ವಲ್ಪ ತಡವಾಗಿದೆ:‌ ಎಇಇ ಚೆಕ್‌ ಮೆಸರ್‌ಮೆಂಟ್‌ ಸ್ವಲ್ಪ ತಡವಾಗಿದ್ದರಿಂದ ಕೂಲಿಕಾರರಿಗೆ ವೇತನ ತಡವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕೇಸೂರು ಗ್ರಾಪಂ ಪಿಡಿಒ ಕೆ. ವಾಗೀಶ್ ಹೇಳಿದರು. ಕೇಸೂರು ಗ್ರಾಮದ ಕೂಲಿಕಾರರ ವೇತನ ತಡವಾಗಿದ್ದರ ಹಿನ್ನೆಲೆಯಲ್ಲಿ ಈಗಾಗಲೆ ಪಿಡಿಒ ಅವರಿಗೆ ನೋಟಿಸ್‌ ನೀಡಲಾಗಿದೆ. ಎರಡು ಮೂರು ದಿನಗಳಲ್ಲಿ ಕೂಲಿ ಹಣ ಖಾತೆಗೆ ಜಮೆಯಾಗಲಿದೆ ಎಂದು ಕುಷ್ಟಗಿ ಇಒ ತಾಪಂ ಅಮರೇಶ್‌ ಯಾದವ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ
ಇಂದು ‘ಬನ’ ತುಳು ಚಿತ್ರ ಕರಾವಳಿಯಲ್ಲಿ ಬಿಡುಗಡೆ