
ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆ ದಶಮಂಟಪಗಳ ಶೋಭಾಯಾತ್ರೆ ಬುಧವಾರ ರಾತ್ರಿ ವೈಭವದಿಂದ ಜರುಗಿತು. ಮೊದಲಿಗೆ ಪೇಟೆ ಶ್ರೀ ರಾಮ ಮಂದಿರ ಮಂಟಪ ರಾತ್ರಿ 9 ಗಂಟೆಗೆ ಸಂಚಾರ ಆರಂಭಿಸುವ ಮೂಲಕ ದಶಮಂಟಪಗಳ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ಈ ವೇಳೆ ಸಾಧಾರಣ ಮಳೆಯಾಯಿತು. ಆರಂಭದಲ್ಲಿ ದಸರೆಗೆ ಬೆರಳೆಣಿಕೆಯ ಮಂದಿ ಕಂಡುಬಂದರು. ನಂತರ ಜನರ ಆಗಮನ ಹೆಚ್ಚಳವಾಯಿತು. ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ದಶಮಂಟಪಗಳ ಶೋಭಾಯಾತ್ರೆಯನ್ನು ನೋಡಲು ವಿವಿಧ ಭಾಗಗಳಿಂದ ಜನರು ಸೇರಿದ್ದರು.
ಮಂಟಪಗಳು ಹೊರಡುವ ಮುನ್ನವೇ ಡಿಜೆ ಹಾಕಿದ ಹಿನ್ನೆಲೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ರಸ್ತೆಯುದ್ದಕ್ಕೂ ಜನರು ದಶಮಂಟಪಗಳನ್ನು ವೀಕ್ಷಿಸಲು ಸಂಚರಿಸಿದರು. ರಸ್ತೆಯ ಬದಿಯಲ್ಲಿ ತಿಂಡಿ ತಿನಿಸು, ಅಲಂಕಾರಿಕಾ ವಸ್ತುಗಳು, ಮಕ್ಕಳ ಆಟಿಕೆ ವಸ್ತುಗಳು, ಪಾತ್ರೆಗಳು, ಬಟ್ಟೆ ಸೇರಿದಂತೆ ವಿವಿಧ ಮಳಿಗೆಗಳು ಕಂಡುಬಂತು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಮುಖ್ಯ ರಸ್ತೆಗಳ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ನಿಯಂತ್ರಿಸುತ್ತಿದ್ದರು ದಸರಾ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರ ವಾಹನಗಳಿಗೆ ಜನರಲ್ ತಿಮ್ಮಯ್ಯ ಮೈದಾನ ಸೇರಿದಂತೆ ಹಲವು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.ಲಕ್ಷಾಂತರ ರುಪಾಯಿ ವೆಚ್ಚದ ಮಂಟಪ
ಮಡಿಕೇರಿ ನಗರದ ಪ್ರಮುಖ ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಿ ದೇವಾಲಯದ ಕರಗಗಳು ರಾತ್ರಿಯಿಡೀ ನಗರವನ್ನು ಸಂಚರಿಸುವ ಮೂಲಕ ಮಡಿಕೇರಿ ದಸರೆಗೆ ಮೆರುಗು ನೀಡಿತು. ಕರಗಗಳನ್ನು ವಾದ್ಯಗೋಷ್ಠಿ ತಂಡ ಮುನ್ನಡೆಸಿತು.