ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಉತ್ಸವಕ್ಕೆ ಸಾಹಿತ್ಯ ಸ್ಪರ್ಶ ನೀಡುವ ‘ಬಹುಭಾಷಾ ಕವಿಗೋಷ್ಠಿ’ 18 ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿದ್ದು, ನಾಡಿನ ಉದಯೋನ್ಮುಖ ಕವಿ,ಕವಿಯಿತ್ರಿಯರ ಕವನ ವಾಚನ ಸಾಹಿತ್ಯಾಭಿಮಾನಿಗಳನ್ನು ಸೆಳೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್, ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆಯುವ ಕವಿಗೋಷ್ಠಿಯಲ್ಲಿ ಆಯ್ದ 60 ಕವನಗಳ ವಾಚನ ನಡೆಯಲಿದೆಯೆಂದು ತಿಳಿಸಿದರು. ಕವಿಗೋಷ್ಠಿಗೆ ಡಿಸಿಸಿ ಬ್ಯಾಂಕ್ ರಸ್ತೆಯ ಬಳಿಯ ‘ರಾಷ್ಟ್ರಕವಿ ಕುವೆಂಪು’ಪುತ್ಥಳಿಗೆ ಕವಿಗೋಷ್ಠಿಯ ಅಧ್ಯಕ್ಷ ಹಿರಿಯ ಕವಿ, ಸಾಹಿತಿ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ_ಪ್ರಕಾಶ್ ಮತ್ತು ಪ್ರಕಾಶ್ ಮತ್ತು ಸಮಿತಿಯ ಪದಾಧಿಕಾರಿಗಳು ಪುಷ್ಪಗುಚ್ಛವನ್ನಿರಿಸಿ ಗೌರವ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದರು. ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರತಿಷ್ಠಿತ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ವಿಜೇತ ಪ್ರಮೋದ್ ಮರವಂತೆ ಅವರನ್ನು ಆಹ್ವಾನಿಸಲಾಗಿದೆಯೆಂದು ತಿಳಿಸಿದರು ಕೊಡಗು ಒಕ್ಕಲಿಗರ ಯುವ ಅಧ್ಯಕ್ಷರಾದ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಮೋರಿಕಲ್ಲು, ಕೊಡವ ಭಾಷಿಕ ಸಮುದಾಯಗಳ ಕೂಟದ ಡಾ.ಮೇಚಿರ ಸುಭಾಶ್ ನಾಣಯ್ಯ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಸಂಜೆ ಸಮಾರೋಪ: ಅಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಕವಿಗಳಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಿದ್ದಾರೆ. ಕವನ ಸಂಕಲನ ಅನಾವರಣ: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿ ಅರ್ಥ ಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ಈ ಬಾರಿ 200 ಕ್ಕೂ ಹೆಚ್ಚು ಕವನಗಳು ಬಂದಿದ್ದು ಅವುಗಳಲ್ಲಿ ಸುಮಾರು 60 ಕವನಗಳನ್ನು ಆಯ್ಕೆ ಮಾಡಿ ಕವನ ಸಂಕಲನ ಹೊರತಲಾಗುತ್ತಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಹುಭಾಷಾ ಕವಿಗೋಷ್ಠಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆ ಕಟ್ಟೆ, ಸದಸ್ಯರಾದ ಅರುಣ್ ಕೂರ್ಗ್, ಅಬ್ದುಲ್ ಕೌಸರ್ ಹಾಗೂ ಎಸ್.ಜಿ.ಉಮೇಶ್ ಇದ್ದರು.