ಸಾಮರಸ್ಯ, ಸಹೋದರತ್ವ ಒಳಗೊಂಡ ಮಡಿಕೇರಿ ದಸರಾ: ಯು.ಟಿ.ಖಾದರ್

KannadaprabhaNewsNetwork |  
Published : Oct 26, 2023, 01:02 AM IST
ಚಿತ್ರ : 25ಎಂಡಿಕೆ10 : ವಿಜಯದಶಮಿ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮಾತನಾಡಿದರು.  | Kannada Prabha

ಸಾರಾಂಶ

ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ವಿಜಯದಶಮಿ ಸಭಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕತೆಯ ಜೊತೆಗೆ ಸಾಮರಸ್ಯ ಮತ್ತು ಸಹೋದರತ್ವ ಒಳಗೊಂಡಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಬಣ್ಣಿಸಿದ್ದಾರೆ. ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಂಗಳವಾರ ನಡೆದ ವಿಜಯದಶಮಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಸರಾ ಹಬ್ಬವು ಪ್ರತಿಯೊಬ್ಬರಲ್ಲಿ ಐಕ್ಯತೆ ಮತ್ತು ಭಾತೃತ್ವವನ್ನು ಒಳಗೊಂಡಿದೆ. ದಸರಾದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ವಿಶೇಷವಾಗಿದೆ ಎಂದು ವಿಧಾನಸಭಾಧ್ಯಕ್ಷರು ನುಡಿದರು. ರಾಷ್ಟ್ರದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಅವುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಲು ಎಲ್ಲರೂ ಪ್ರಯತ್ನಿಸಬೇಕು. ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಣುತೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಭಾತೃತ್ವದಿಂದ ಬದುಕಿದಾಗ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಎಂದರು. ಪ್ರತಿಯೊಬ್ಬ ಮನುಷ್ಯರಿಗೂ ಒಂದೇ ರೀತಿಯ ಅಂಗಾಂಗಗಳನ್ನು ದೇವರು ಸೃಷ್ಟಿಸಿರುತ್ತಾನೆ. ಕಪ್ಪು, ಬಿಳುಪು ಅಥವಾ ಕಂದು ಬಣ್ಣ ಇರಬಹುದು. ಮನುಷ್ಯನ ಅಂಗಾಂಗ ರಚನೆ ಒಂದೇ ರೀತಿ ಇರುತ್ತದೆ. ಆದ್ದರಿಂದ ಎಲ್ಲರೂ ಸಹೋದರತ್ವದಿಂದ ಬದುಕು ನಡೆಸುವಂತಾಗಬೇಕು. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಬರ ಇದ್ದರೂ ಸಹ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿ ದಸರಾಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಈ ಬಾರಿ ಮಳೆ ಕಡಿಮೆ ಆದ ಕಾರಣ ಬರ ಎಂದು ಘೋಷಣೆಯಾಗಿದೆ. ಆದಷ್ಟು ಇತಿ ಮಿತಿಯಲ್ಲಿ ಕಾರ್ಯಕ್ರಮವನ್ನು ಆಯೊಜಿಸಬೇಕು ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಲಹೆ ನೀಡಿದ್ದರು. ಆದರೂ ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು. ದಸರಾ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಅನುದಾನಲ್ಲಿ 20-30 ಲಕ್ಷ ರು. ಉಳಿಸಿ, ಗಾಂಧಿ ಮೈದಾನದಲ್ಲಿ ಶಾಶ್ವತ ವೇದಿಕೆ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಇದೇ ಸಂದರ್ಭ ಪ್ರಕಟಿಸಿದರು. ಪ್ರತಿಯೊಬ್ಬ ನಾಗರಿಕರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಹೀಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಆದ್ಯತೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಕೃಷಿ ಜೊತೆಗೆ ಪ್ರವಾಸೋದ್ಯಮವನ್ನು ಸಹ ಅಭಿವೃದ್ಧಿ ಪಡಿಸಬೇಕಿದೆ ಎಂದರು. ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಮಾತನಾಡಿ, ಮಡಿಕೇರಿ ದಸರಾ ಆಚರಣೆ ಸಂಬಂಧಿಸಿದಂತೆ ಮೈಸೂರು ದಸರಾ ಮಾದರಿಯಲ್ಲಿ ಬಜೆಟ್‌ನಲ್ಲಿ ಅನುದಾನ ಪ್ರಕಟಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದು ಕೋರಿದರು. ಚಿತ್ರನಟ ಅಭಿಷೇಕ್ ಅಂಬರೀಶ್ ಮಾತನಾಡಿ, ನಮ್ಮ ಕುಟುಂಬ ಮತ್ತು ಕೊಡಗು ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆಯವರು ಕೊಡಗು ಜಿಲ್ಲೆಯನ್ನು ಹೆಚ್ಚು ಗೌರವಿಸುತ್ತಿದ್ದರು ಎಂದು ಹೇಳಿದರು. ನಗರಸಭೆ ಅಧ್ಯಕ್ಷರು ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಕೋರ್ಟ್ ಹಿರಿಯ ವಕೀಲರಾದ ಚಂದ್ರಮೌಳಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಪೌರಾಯುಕ್ತ ವಿಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ನಗರದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ
17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಿದ್ಧತೆ : 10 ಇಲಾಖೆ ಸಭೆ