ಬೆಂಗಳೂರು : ಸರ್ಕಾರದ ನೋಂದಾಯಿತ ಸಂಸ್ಥೆಗಳೇ ಇವತ್ತು ಆರ್ಥಿಕ ಅವ್ಯವಹಾರದಲ್ಲಿ ಮುಳುಗಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ನೋಂದಣಿಯೇ ಆಗದೆ ಕಳೆದ 100 ವರ್ಷಗಳಿಂದ ಕೋಟ್ಯಂತರ ಜನರ ವಿಶ್ವಾಸ ಸಂಪಾದಿಸಿ ದೇಶ ಸೇವೆ ಮಾಡುತ್ತಿದೆ. ಆರ್‌ಎಸ್‌ಎಸ್‌ ಅಂದು ನೋಂದಣಿ ಆಗಿರಲಿಲ್ಲ. ಇಂದೂ ನೋಂದಣಿ ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಗೃಹ ಸಚಿವ ಪ್ರಿಯಾಂಕ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಹಿಂದೂ ಜಾಗರಣ ವೇದಿಕೆ 80ನೇ ಸ್ವಾತಂತ್ರ್ಯ ದಿನಾಚರಣೆ

ಹಿಂದೂ ಜಾಗರಣ ವೇದಿಕೆ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶುಕ್ರವಾರ ತಡರಾತ್ರಿ ನಗರದ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿರಂಗ ಧ್ವಜ ಮತ್ತು ಕೇಸರಿ ಧ್ವಜ ಹಾರಿಸಿ ಅವರು ಮಾತನಾಡಿದರು.

ಸೇವೆಯನ್ನು ಇವತ್ತು ನೆನಪಿಸಿಕೊಳ್ಳಬೇಕು

ದೇಶ ವಿಭಜನೆ ವೇಳೆ ಆರ್‌ಎಸ್‌ಎಸ್‌, ಹಿಂದೂ ಜಾಗರಣ ವೇದಿಕೆ ಮೊದಲಾದ ಸಾಮಾಜಿಕ ಸಂಸ್ಥೆಗಳು ಹಿಂದೂಗಳಿಗೆ ಮಾಡಿದ ಸೇವೆಯನ್ನು ಇವತ್ತು ನೆನಪಿಸಿಕೊಳ್ಳಬೇಕು. ಪ್ರಿಯಾಂಕ್‌ ಖರ್ಗೆ ಅವರೇ, ಹೈದರಾಬಾದ್‌ನಲ್ಲಿ ರಜಾಕರ ಹಲ್ಲೆಯಿಂದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ತೊಟ್ಟ ಬಟ್ಟೆಯಲ್ಲಿ ಗುಲ್ಬರ್ಗಕ್ಕೆ ಓಡಿ ಬಂದವರು. ನಿಮ್ಮ ಕುಟುಂಬ ಓಡಿ ಬಂದಿತ್ತು. ಅವತ್ತು ನಿಮ್ಮ ಪರ ನಿಂತವರು ಇದೇ ಆರ್‌ಎಸ್‌ಎಸ್‌ನ ಸಣ್ಣ ಹುಡುಗರು ಎಂದು ಹೇಳಿದರು.


ಅಂದು ಹಿಂದೂಗಳ ರಕ್ಷಣೆ ಮಾಡಿ ಜೋಪಾನವಾಗಿ ಸುರಕ್ಷಿತ ಸ್ಥಳಕ್ಕೆ ಸೇರಿಸಿದರು. ನಿಮ್ಮ ಪೊಲೀಸರು, ರಾಜಕಾರಣಿಗಳು, ರಾಜಕೀಯ ನಾಯಕರು ಯಾರೂ ಸಹಾಯಕ್ಕೆ ಬರಲಿಲ್ಲ. ನೀವು ಇವತ್ತು ಅದೇ ಆರ್‌ಎಸ್‌ಎಸ್ ಬಗ್ಗೆ ಬೊಟ್ಟು ಮಾಡಿ ತೋರಿಸುತ್ತೀರಾ? ಅವತ್ತೂ ಆರ್‌ಎಸ್‌ಎಸ್‌ ನೋಂದಣಿ ಆಗಿರಲಿಲ್ಲ. ಇವತ್ತೂ ಆಗುವುದಿಲ್ಲ. ಎಲ್ಲದಕ್ಕೂ ಆರ್‌ಎಸ್‌ಎಸ್‌ ನೋಂದಣಿಯೇ ಮಾನದಂಡ ಅಲ್ಲ. ಪ್ರಿಯಾಂಕ್‌ ಖರ್ಗೆ ಅವರು ಆರ್‌ಎಸ್‌ಎಸ್‌ನ ಕೆಲಸವನ್ನು ನೆನಪು ಮಾಡಿಕೊಳ್ಳಬೇಕು ಎಂದು ಬಿ.ಎಲ್‌.ಸಂತೋಷ್‌ ಕುಟುಕಿದರು.