ಹುಬ್ಬಳ್ಳಿ:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಟೀಕೆ ಮಾಡುವ ಬದಲು ಅದರ ಶಾಖೆಗೆ ಭೇಟಿ ನೀಡಿ, ಸಂಘದ ಚಟುವಟಿಕೆ ಅರಿತುಕೊಳ್ಳಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲಹೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ 101ನೇ ವರ್ಷಕ್ಕೆ ಕಾಲಿಟ್ಟಿದೆ. ಸಂಘದ ಬಗ್ಗೆ ತಿಳಿದುಕೊಳ್ಳಬೇಕಾದರೆ ಬೆಳಗ್ಗೆ ನಡೆಯುವ ಶಾಖೆಗೆ ಬಂದು ಒಂದು ಗಂಟೆ ಕುಳಿತು ಮಕ್ಕಳೊಂದಿಗೆ ಬೆರೆಯಿರಿ. ಆಗ ಸಂಘ ಏನು ಮಾಡುತ್ತದೆ, ಮಕ್ಕಳಿಗೆ ಏನು ಕಲಿಸುತ್ತದೆ ಎಂಬುದು ಅರ್ಥವಾಗುತ್ತದೆ ಎಂದರು.
ಅತಿವೃಷ್ಟಿ ಸೇರಿದಂತೆ ದೇಶದಲ್ಲಿ ಸಂಕಷ್ಟದ ಸಂದರ್ಭಗಳು ಎದುರಾದಾಗ ಆರ್‌ಎಸ್‌ಎಸ್ ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ತೊಡಗುತ್ತಾರೆ. ಹೀಗಿರುವಾಗ ಸಂಘದ ವಿರುದ್ಧ ವಿನಾಕಾರಣ ಟೀಕೆ ಮಾಡುವುದನ್ನು ಗೃಹ ಸಚಿವರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡರ ಮಕ್ಕಳೂ ಸೇರಿದಂತೆ ಎಲ್ಲ ವರ್ಗದ ಮಕ್ಕಳೂ ಆರ್‌ಎಸ್‌ಎಸ್ ಶಾಖೆಗಳಲ್ಲಿ ಭಾಗವಹಿಸುತ್ತಾರೆ. ಗೃಹ ಸಚಿವರು ತಮ್ಮ ಮಕ್ಕಳನ್ನೂ ಶಾಖೆಗೆ ಕಳುಹಿಸಿ, ಸಂಘದ ಚಟುವಟಿಕೆಯನ್ನು ಅರಿಯಲು ಅವಕಾಶ ಮಾಡಿಕೊಡಲಿ ಎಂದು ತಿರುಗೇಟು ನೀಡಿದರು.
ರಾಜ್ಯದ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳತ್ತ ಗೃಹ ಸಚಿವರು ಗಮನಹರಿಸಬೇಕು. ಬೆಳಗ್ಗೆಯಿಂದ ರಾತ್ರಿ ವರೆಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದರಿಂದ ಸಂಘಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಬದಲಾಗಿ ಸಂಘ ಮತ್ತಷ್ಟು ಬೆಳೆಯುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದರು.
ಬಿಸಿ ಮುಟ್ಟಿಸುವ ಪ್ರಯತ್ನ:
ಧ್ವಜಾರೋಹಣ ನೆರವೇರಿಸಲು ಸಮಯವಿಲ್ಲ ಎಂಬ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದ ಪ್ರಯತ್ನವಾಗಿರಬಹುದು. ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿಗೆ ಒಂದು ರೀತಿಯಲ್ಲಿ ಸೂಚನೆ ನೀಡುವ ಪ್ರಯತ್ನ ಮಾಡಿದ್ದಾರೆ. "ನೀವು ಹೇಳಿದಂತೆಲ್ಲ ನಾವು ನಡೆದುಕೊಳ್ಳುವುದಿಲ್ಲ " ಎಂಬ ಸಂದೇಶವನ್ನು ಸರ್ಕಾರಕ್ಕೆ ತಲುಪಿಸುವ ಉದ್ದೇಶ ಇರಬಹುದು ಎಂದರು.