ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಜಾಗ ಹಾಗೂ ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026ರ ಮುಖಾಂತರ ಹಿಂಬಾಗಿಲ ಮುಖಾಂತರ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ‘ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ವಿಧೇಯಕದಲ್ಲಿ ಆರ್‌ಎಸ್‌ಎಸ್ ಹೆಸರಿಲ್ಲ. ಹೀಗಿದ್ದರೂ ಬಿಜೆಪಿ ಹಾಗೂ ನೋಂದಣಿ ಇಲ್ಲದ ಸಂಘಕ್ಕೆ ಆತಂಕ ಯಾಕೆ? ವಿಧೇಯಕ ಕಾನೂನಿಗೆ ವಿರುದ್ಧವಾಗಿದ್ದರೆ ಸದನದಲ್ಲಿ ಸಲಹೆ ನೀಡಲಿ. ಪ್ರತಿತಿಪಕ್ಷದವರು ಆಗಲಿ, ಬೇರೆಯವರಾಗಲಿ ವಿಧೇಯಕದ ಪ್ರತಿ ಓದಿಲ್ಲ. ಮೊದಲು ವಿಧೇಯಕ ಸದನದಲ್ಲಿ ಪ್ರಸ್ತಾವನೆಗೆ ಬರಲಿ. ಬಳಿಕ ಅವರು ಸಲಹೆ ಇದ್ದರೆ ತಿಳಿಸಲಿ ನಾವು ಪರಿಗಣಿಸಿ ವಿಧೇಯಕ ತಿದ್ದುಪಡಿ ಮಾಡುತ್ತೇವೆ. ಆದರೆ ಮಾಹಿತಿಯೇ ಇಲ್ಲದೆ ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನೇರವಾಗಿ ಆರ್‌ಎಸ್‌ಎಸ್ ಹೆಸರನ್ನು ಉಲ್ಲೇಖಿಸದಿದ್ದರೂ ಸರ್ಕಾರದ ಕ್ರಮಗಳ ಉದ್ದೇಶ ಸ್ಪಷ್ಟ. ಸದನದಲ್ಲಿ ಆರ್‌ಎಸ್‌ಎಸ್‌ನ ಪ್ರಾರ್ಥನೆಯ ಉಲ್ಲೇಖ ಮಾಡಿದ್ದ ಮುಖ್ಯಮಂತ್ರಿಗಳ ನಿಲುವು ಇದೀಗ ಬಯಲಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನಿಮಗೆ ತಾಕತ್ ಇದ್ದರೆ ಆರ್‌ಎಸ್‌ಎಸ್ ನಿಷೇಧಿಸಿ ಎಂದು ಸವಾಲು ಹಾಕಿದರು.
ಆರ್‌ಎಸ್‌ಎಸ್‌ನಿಂದ ಯಾವ ದೇಶವಿರೋಧಿ ಚಟುವಟಿಕೆ ನಡೆದಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಯ ಜವಾಬ್ದಾರಿಗಳ ಬಗ್ಗೆ ಗಮನಹರಿಸುವ ಬದಲು ಪದೇಪದೇ ಆರ್‌ಎಸ್‌ಎಸ್ ಅನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ವಿರುದ್ಧವೇ ಇಷ್ಟೊಂದು ಆಸಕ್ತಿ ಇದ್ದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರ್‌ಎಸ್‌ಎಸ್ ವಿರೋಧಿ ಇಲಾಖೆ ಪಡೆದುಕೊಳ್ಳಲಿ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ತಂದೆಯಿಂದಲೇ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಆಗಿಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಆರ್‌ಎಸ್‌ಎಸ್ ವಿರುದ್ಧ ನಿಷೇಧ ಹೇರಲಾಗಿದ್ದರೂ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆದಿದೆ. ಇತಿಹಾಸದಿಂದ ಪಾಠ ಕಲಿತು ಸರ್ಕಾರ ಕಾರ್ಯನಿರ್ವಹಿಸಬೇಕು. ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಗೃಹ ಸಚಿವರ ಕರ್ತವ್ಯ. ಅಂತಹ ವಿಚಾರಗಳ ಬಗ್ಗೆ ಗಮನಹರಿಸದೆ ಆರ್‌ಎಸ್‌ಎಸ್ ಕುರಿತು ಚರ್ಚೆ ಮಾಡುವುದಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ವಿಧೇಯಕ ಮಂಡಿಸಲಿ:
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಮೊದಲು ವಿಧೇಯಕ ಮಂಡಿಸಲಿ. ಈ ಪ್ರಿಯಾಂಕ್ ಖರ್ಗೆ ಮೊದಲಿನಿಂದಲೂ ಆರ್‌ಎಸ್‌ಎಸ್, ಪ್ರಧಾನಿ ಅವರನ್ನು ವಿರೋಧಿಸುತ್ತಿದ್ದಾರೆ. ಪದೇ ಪದೇ ತೀಟೆ ಮಾಡಿಕೊಂಡು ಬರುತ್ತಿದ್ದಾರೆ. ಕಿತಾಪತಿ ಮಾಡಿದರೆ ಅಭಿವೃದ್ಧಿ ಮಾಡಲು ಆಗಲ್ಲ. ಸಂಬಳ, ಪಿಂಚಣಿ ಕೊಡುವುದಕ್ಕೆ ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ವೈಯಕ್ತಿಕವಾಗಿ ತೆಗೆದುಕೊಂಡರೆ ಬೋರ್ಡಿಗೆ ಇರದಂತೆ ಹೋಗಿ ಬಿಡುತ್ತೀರಾ. ಇನ್ನು ಒಂದೂವರೆ ವರ್ಷ ಕುಣಿಯುತ್ತೀರಿ ಅಷ್ಟೇ, ಕುಣಿಯಿರಿ ಎಂದು ಕಿಡಿಕಾರಿದರು.
ಆರೆಸ್ಸೆಸ್ ಹೆಸರು ಮಸೂದೆಯಲ್ಲಿಲ್ಲ
ಸಚಿವ ಸಂಪುಟ ಅನುಮತಿ ನೀಡಿರುವ ಮಸೂದೆಯಲ್ಲಿ ಆರೆಸ್ಸೆಸ್ ಹೆಸರಿಲ್ಲ. ಹೀಗಿದ್ದರೂ ಬಿಜೆಪಿ ಹಾಗೂ ನೋಂದಣಿ ಇಲ್ಲದ ಸಂಘಕ್ಕೆ ಆತಂಕ ಏಕೆ? ಮೊದಲು ವಿಧೇಯಕದ ಪ್ರತಿ ಓದಲಿ. ಸಲಹೆ ಇದ್ದರೆ ತಿಳಿಸಲಿ. ಮಾಹಿತಿಯೇ ಇಲ್ಲದೆ ಮಾತನಾಡುವುದು ಸರಿಯಲ್ಲ.
- ಪ್ರಿಯಾಂಕ್ ಖರ್ಗೆ, ಗೃಹ ಸಚಿವ
