ಅವೈಜ್ಞಾನಿಕ ಲಾರಿ ನಿಲ್ದಾಣ : ಸ್ಥಳಾಂತರಕ್ಕೆ ವರ್ತಕರ ಒತ್ತಾಯ

KannadaprabhaNewsNetwork |  
Published : Feb 04, 2024, 01:31 AM IST
ಲಾರಿ ನಿಲ್ದಾಣ ಸ್ಥಳಾಂತರಕ್ಕೆ ವರ್ತಕರ ಒತ್ತಾಯ | Kannada Prabha

ಸಾರಾಂಶ

ಲಾರಿ ಮಾಲೀಕರು ಮತ್ತು ಚಾಲಕರ ಸಂಘದವರು ಶನಿವಾರ ‘ಲಾರಿ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ’ ಎಂಬ ಬೋರ್ಡ್ ಅಳವಡಿಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡ ಅಕ್ಕಪಕ್ಕದ ಅಂಗಡಿ, ಹೊಟೇಲ್‌ಗಳ ಪ್ರಮುಖರು ಲಾರಿ ನಿಲ್ದಾಣವನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಭಿವೃದ್ಧಿ ಹೊಂದುತ್ತಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ವಾಹನಗಳ ಸಮರ್ಪಕ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ನಗರದಲ್ಲಿ ಲಾರಿಗಳ ನಿಲುಗಡೆಗೆ ಸೂಕ್ತ ಜಾಗ ಗುರುತಿಸಬೇಕೆಂಬ ಕೂಗು ಹಿಂದಿನಿಂದಲೇ ಕೇಳಿ ಬರುತ್ತಿದ್ದರೂ, ಇದುವರೆಗೂ ಸರಿಯಾದ ನಿಲ್ದಾಣ ಸಿಕ್ಕಿಲ್ಲ. ಈಗಷ್ಟೇ ಉದ್ಘಾಟನೆ ಗೊಂಡಿರುವ ನೂತನ ಎಸ್ಪಿ ಕಚೇರಿ ಎದುರಿನ ಜಾಗ ಲಾರಿ ನಿಲ್ದಾಣಕ್ಕೆ ಸೂಕ್ತವಾಗಿದ್ದು, ಅಲ್ಲೇ ಜಾಗ ಗುರುತಿಸುವಂತೆ ಲಾರಿ ಮಾಲೀಕರು ಮತ್ತು ಚಾಲಕರ ಸಂಘದಿಂದ ನಗರಸಭೆಗೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾ ದಂಡಾಧಿಕಾರಿಗಳು ಬೇರೆಡೆ ಜಾಗ ಗುರುತಿಸಿದ್ದು, ಅಲ್ಲಿ ಲಾರಿ ನಿಲ್ಲಿಸಲು ಸ್ವತಃ ಮಾಲೀಕರು ಹಾಗೂ ಚಾಲಕರೇ ಸಿದ್ದರಿಲ್ಲ. ರಸ್ತೆ ಬದಿಯ ಅಂಗಡಿ ಮಾಲೀಕರೂ ಕೂಡ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟಕ್ಕೂ ಅದ್ಯಾವ ಜಾಗ ಅಂದ್ರೆ.. ಕೊಹಿನೂರ್ ರಸ್ತೆ ಜಂಕ್ಷನ್‌ ನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಬಲಭಾಗ. ಅಲ್ಲಿ ಲಾರಿ ನಿಲ್ದಾಣಕ್ಕೆ 100 ಮೀಟರ್ ಜಾಗ ನೀಡಿ, ಅದರಿಂದಾಚೆಗಿನ 100 ಮೀಟರ್ ಜಾಗವನ್ನು ಇತರೆ 4 ಚಕ್ರದ ವಾಹನಗಳ ಪಾರ್ಕಿಂಗ್‌ಗೆ ನೀಡಲಾಗಿದೆ. ಆದರೆ ಈ ಭಾಗದಲ್ಲಿ ಅಂಗಡಿ, ಹೋಟೆಲ್‌ಗಳು ಹೆಚ್ಚಿದ್ದು, ಅಲ್ಲಿಗೆ ಬರುವ ಗ್ರಾಹಕರು ಲಾರಿ ನಿಲ್ದಾಣಕ್ಕೆ ಸೂಚಿಸಿದ ಜಾಗದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಆದರಿಂದ ಲಾರಿ ಮಾಲೀಕರು ಮತ್ತು ಚಾಲಕರ ಸಂಘದವರು ಶನಿವಾರ ‘ಲಾರಿ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ’ ಎಂಬ ಬೋರ್ಡ್ ಅಳವಡಿಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡ ಅಕ್ಕಪಕ್ಕದ ಅಂಗಡಿ, ಹೊಟೇಲ್‌ಗಳ ಪ್ರಮುಖರು ಲಾರಿ ನಿಲ್ದಾಣವನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

ಕಾರು ನಿಲುಗಡೆಗೆ ಪರದಾಡುವ ಪರಿಸ್ಥಿತಿ ಇರುವ ಜಾಗದಲ್ಲಿ ಲಾರಿಗಳು ನಿಲುಗಡೆಗೊಂಡರೆ ವಾಹನಗಳ ಓಡಾಟಕ್ಕೆ ಭಾರಿ ಸಮಸ್ಯೆ ಉಂಟಾಗಲಿದೆ. ಇದು ಅವೈಜ್ಞಾನಿಕ ಕ್ರಮ ಎಂದು ಆರೋಪಿಸಿದ್ದು , ಬೇರೆಡೆ ಲಾರಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುವುದೆ ವರ್ತಕರ ಒತ್ತಾಯವಾಗಿದೆ.

ಈ ವೇಳೆ ಸ್ಥಳಕ್ಕಾಗಮಿಸಿದ ನಗರಸಭೆಯ ಕಂದಾಯ ಅಧಿಕಾರಿ ತಾಹೀರ್, ನಗರಸಭೆಯ ಅನುಮತಿ ಪಡೆದ ಬಳಿಕವಷ್ಟೇ ಲಾರಿ ನಿಲ್ದಾಣದ ಬೋರ್ಡ್ ಅಳವಡಿಸುವಂತೆ ಸೂಚಿಸಿದ್ದಾರೆ. ಇನ್ನು ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿಗೆ ಇರುವುದರಿಂದ ಲಾರಿ ನಿಲ್ದಾಣಕ್ಕೆ ಜಾಗ ಪೂರಕವಾಗಿಲ್ಲ. ನೂತನ ಎಸ್ಪಿ ಕಚೇರಿ ಎದುರಿನ ಜಾಗಕ್ಕೆ ಸ್ಥಳಾಂತರಿಸಬೇಕೆಂಬುದು ಲಾರಿ ಮಾಲೀಕರು ಹಾಗೂ ಚಾಲಕರ ಆಗ್ರಹವಾಗಿದ್ದು, ಜಾಗದ ವಿಚಾರದಲ್ಲಿ ಲಾರಿ ಚಾಲಕರು ಹಾಗೂ ಅಂಗಡಿ ಮಾಲೀಕರ ನಡುವೆ ಆಗಾಗ ಚರ್ಚೆ, ಗೊಂದಲ ಉಂಟಾಗ್ತಿದ್ದು, ಸಂಬಂಧಪಟ್ಟವರು ಕೂಡಲೇ ಸಮಸ್ಯೆಗೆ ಇತಿಶ್ರೀ ಹಾಡುವ ಅನಿವಾರ್ಯತೆ ಎದುರಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ