ಮಡಿಕೇರಿ: ಕೆಎಸ್‌ಆರ್‌ಟಿಸಿ ಪ್ರಥಮ ‘ದಸರಾ ಟೂರ್ ಪ್ಯಾಕೇಜ್’

KannadaprabhaNewsNetwork |  
Published : Oct 06, 2026, 02:30 AM IST
ಚಿತ್ರ :  5ಎಂಡಿಕೆ1 : ಮಡಿಕೇರಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ. | Kannada Prabha

ಸಾರಾಂಶ

ದಸರಾ ಉತ್ಸವದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಮಡಿಕೇರಿ ಘಟಕದಿಂದ ಇದೇ ಮೊದಲ ಬಾರಿಗೆ ದಸರಾ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ.

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ ; ದಸರಾ ಉತ್ಸವದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಮಡಿಕೇರಿ ಘಟಕದಿಂದ ಇದೇ ಮೊದಲ ಬಾರಿಗೆ ದಸರಾ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕಾವೇರಿ ದರ್ಶನ ಹಾಗೂ ಕೊಡಗಿನ ಸೊಬಗು ಎಂಬ ಎರಡು ಪ್ರತ್ಯೇಕ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಲಾಗಿದೆ. ಪ್ರವಾಸಿಗರು ಕಡಿಮೆ ದರದಲ್ಲಿ ಕೊಡಗಿನ ಅನುಭವ, ಭಕ್ತಿಯ ಪಯಣ, ಪ್ರಕೃತಿಯನ್ನು ಆಸ್ವಾದಿಸಬಹುದಾಗಿದೆ. ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಕೆಎಸ್ ಆರ್ ಟಿಸಿ ಯಿಂದ ವಿವಿಧ ಪ್ಯಾಕೇಜ್ ಮಾಡಲಾಗುತ್ತಿದೆ. ಇದೀಗ ಕೊಡಗು ಜಿಲ್ಲೆಯಲ್ಲಿನ ದೇವಾಲಯಗಳು ಹಾಗೂ ಪ್ರಕೃತಿ ಸೊಬಗನ್ನು ಪ್ರವಾಸಿಗರು ಹಾಗೂ ಸಾರ್ವಜನಿಕರು ಒಂದೇ ದಿನದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 11ರಿಂದ 25ರ ವರೆಗೆ ನಿಗದಿತ ದಿನಾಂಕದಿಂದ ಬೆಳಗ್ಗೆ 6.30 ಗಂಟೆಯಿಂದ ಬಸ್ ಗಳು ಮಡಿಕೇರಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಸಂಚರಿಸಲಿದೆ. ದೊಡ್ಡವರಿಗೆ ರು.400 ಹಾಗೂ ಮಕ್ಕಳಿಗೆ ರು.300 ನಿಗದಿ ಪಡಿಸಲಾಗಿದೆ. ಒಂದು ಪ್ರವಾಸಿ ತಾಣದಲ್ಲಿ ಹಾಗೂ ದೇಗುಲದಲ್ಲಿ ಇಂತಿಷ್ಟು ಸಮಯ ನೀಡಲಾಗುತ್ತದೆ. ಬೆಳಗ್ಗೆ 6.30ಕ್ಕೆ ಆರಂಭವಾದ ಸಂಚಾರ ತನ್ನ ನಿಗದಿತ ಮಾರ್ಗದಲ್ಲಿ ಸಂಚರಿಸಿ ಸಂಜೆ 6.30ಕ್ಕೆ ಕೊನೆಗೊಳ್ಳಲಿದೆ. ಕಾವೇರಿ ದರ್ಶನ ಪ್ಯಾಕೇಜ್ ನಲ್ಲಿ ಪ್ರಮುಖವಾಗಿ ಕೊಡಗಿನ ಇತಿಹಾಸ ಪ್ರಸಿದ್ಧ ದೇವಾಲಯಗಳನ್ನು ವೀಕ್ಷಿಸಲು ಅವಕಾಶ ಮಾಡಲಾಗಿದ್ದು, ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ-ನಾಪೋಕ್ಲು ಸಮೀಪದ ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ-ತಲಕಾವೇರಿ, ಅಬ್ಬಿ ಜಲಪಾತ ಹಾಗೂ ಮಡಿಕೇರಿ ರಾಜಾಸೀಟು ತಾಣಗಳು ಈ ಪ್ಯಾಕೇಜ್ ನಲ್ಲಿ ಇರಲಿದೆ. ಈ ಪ್ರಯಾಣವು 130 ಕಿ.ಮೀ ಸಂಚರಿಸಲಿದೆ. ಕೊಡಗಿನ ಸೊಬಗು ಪ್ಯಾಕೇಜ್ ನಲ್ಲಿ ಪ್ರವಾಸಿ ತಾಣಗಳನ್ನು ಕೇಂದ್ರೀಕರಿಸಲಾಗಿದ್ದು, ಮುಂಜಾನೆಯೇ ಮಡಿಕೇರಿಯ ಓಂಕಾರೇಶ್ವರ ದೇವಾಲಯ- ಕುಶಾಲನಗರದ ಹಾರಂಗಿ ಜಲಾಶಯ, ಆನೆ ಶಿಬಿರ, ಬೈಲುಕೊಪ್ಪಲಿನ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ಪ್ಲಾಂಟೇಷನ್ ಟೂರ್, ಅಬ್ಬಿ ಜಲಪಾತ ಹಾಗೂ ರಾಜಾಸೀಟು ತಾಣಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಪ್ಯಾಕೇಜ್ ಅನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಪ್ರಯಾಣವು 150 ಕಿಮೀ ಸಂಚರಿಸಲಿದೆ. ಮುಂಗಡ ಬುಕ್ಕಿಂಗ್ ಗಾಗಿ ಕೆಎಸ್ ಆರ್ ಟಿಸಿ www.ksrtc.in ಹಾಗೂ ಹೆಚ್ಚಿನ ಮಾಹಿತಿಗೆ 6360308963, 9481106351, 9731068637 ಅನ್ನು ಸಂಪರ್ಕಿಸಬಹುದಾಗಿದೆ.

ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದ್ದು, ಒಂದು ಪ್ಯಾಕೇಜ್ ನಲ್ಲಿ 50ಕ್ಕೂ ಅಧಿಕ ಬುಕ್ಕಿಂಗ್ ಆದರೆ ಮತ್ತೆ ಹೆಚ್ಚುವರಿ ಬಸ್ ಅನ್ನು ಕೂಡ ಬಿಡಲಾಗುತ್ತದೆ ಎಂದು ಡಿಪೋ ವ್ಯವಸ್ಥಾಪಕರು ಮಾಹಿತಿ ನೀಡಿದ್ದು, ಬಸ್ ಸಂಚಾರದ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಪ್ರವೇಶ ಶುಲ್ಕ, ಊಟ ಹಾಗೂ ಇತರೆ ವೆಚ್ಚಗಳನ್ನು ಪ್ರಯಾಣಿಕರೇ ಭರಿಸಬೇಕಾಗಿದೆ. ಈ ಸಂಚಾರದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ನಮ್ಮ ವಿಭಾಗದ ಅಧಿಕಾರಿಗಳ ಸೂಚನೆಯಂತೆ ದಸರಾ ಟೂರ್ ಪ್ಯಾಕೇಜ್ ಅನ್ನು ಅ.11ರಿಂದ 25ರ ವರೆಗೆ ಆಯೋಜಿಸಲಾಗಿದೆ. ಕಾವೇರಿ ದರ್ಶನ ಹಾಗೂ ಕೊಡಗಿನ ಸೊಬಗು ಎಂಬ ಎರಡು ಪ್ರತ್ಯೇಕ ಪ್ಯಾಕೇಜ್ ಇರಲಿದೆ. ಒಂದು ಬಸ್ ನಲ್ಲಿ 50ಕ್ಕೂ ಅಧಿಕ ಮಂದಿ ಮುಂಗಡ ಬುಕ್ಕಿಂಗ್ ಇದ್ದರೆ ಮತ್ತೆ ಹೆಚ್ಚುವರಿ ಬಸ್ ಬಿಡಲಾಗುತ್ತದೆ. ಮಡಿಕೇರಿ ದಸರೆಗೆ ಕೆಎಸ್ ಆರ್ ಟಿಸಿ ಡಿಪೋದಿಂದಲೂ ಕೊಡುಗೆ ಇರಬೇಕೆಂಬ ನಿಟ್ಟಿನಲ್ಲಿ ಈ ಪ್ಯಾಕೇಜ್ ಆರಂಭಿಸಲಾಗಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. -ರಾಮಚಂದ್ರ ದರ್ಶನ್, ಡಿಪೋ ವ್ಯವಸ್ಥಾಪಕರು ಕೆಎಸ್ ಆರ್ ಟಿಸಿ ಮಡಿಕೇರಿ ಘಟಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ
ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ